ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ
ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ
ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ
ಜೇಡನ ಸಮೇತ ಕಿತ್ತೆಸೆದಿರುವೆ
ಬರುವುದಾದರೆ ಇಂದೆ ಬಂದುಬಿಡು
ತೋರಣವಿಲ್ಲ ಬಾಗಿಲಿಗೆ
ಹೊಸಿಲಲ್ಲಿಲ್ಲ ರಂಗೋಲಿ
ಎಂದೆಲ್ಲ ಸಬೂಬುಬೇಡ
ನೀ ಬಂದೇ ಬರುವೆಯಾದರೆ
ಆಸೆಗಳ ಧೂಪದಾರತಿ ಎತ್ತಿ
ಕನಸುಗಳನ್ನೆಲ್ಲ ಹೆಣೆದು
ಮಾಲೆ ಮಾಡಿ ಕಾಯುವೆ
ಇಂದೋ, ನಾಳೆಯೋ ಅನುಮಾನಿಸದೆ
ಬಂದೇ ಬಿಡು ಈ ಗಳಿಗೆಯೇ
ನೀ ಬಂದಾಕ್ಷಣವೇ
ಹೊಸದಿನ, ಹೊಸತನ
ಹೊಸಮನ, ಹೊಸತು
ಎಲ್ಲವೂ ಹೊಚ್ಚಹೊಸತು
ವಿದಾಯ ನೆನ್ನೆಗೆ, ನೋವಿಗೆ, ಹತಾಶೆಗೆ
ಪ್ರತೀಕ್ಷೆಯಲ್ಲಿಯೇ ಕಳೆದಾಯಿತು
ಯುಗ ಯುಗವೆಲ್ಲ
ಇನ್ನಾದರೂ ಬಂದು ಬಿಡು
ಕಾಯಿಸದೇ, ವಿಳಂಬಿಸದೆ
*****