ಹಲವುಳಿದ ಅಶರೀರ ಹೆಣ್ಣು ಭ್ರೂಣಗಳ ಆಕ್ರಂದನ
ಮಿಡಿವ ಎದೆ ನರಳಿ, ಮಿಕ್ಕವರಿಗೆ ಖಾಲಿ ಮೌನ
ಅಮ್ಮಾ… ಅಮ್ಮಾ… ಗಾಳಿಯೊಡಲು ಸೀಳಿ
ತೇಲಿ ಬರುವ ನೂರಾರು ಹೆಣ್ಣು ಉಲಿ.
ಗರ್ಭದೊಳಗೇ ಜೀವ ಅಸ್ಪಷ್ಟ ರೂಪವಾದಂತೆ
ಕೊಬ್ಬಿದ ಕುರಿಯ ಕಟುಕ ಕಚಕ್ಕನೆ ಕತ್ತರಿಸಿದಂತೆ
ಮೃತ್ಯುರೂಪ ನಿರ್ದಾಕ್ಷಿಣ್ಯದಿ ಜೀವ ತುಂಡರಿಸಿ
ಎದೆಯೊಳಗಿನ ಭಾವಗಳ ನಿಮಿಷಾರ್ಧದಿ ಒರೆಸಿ
ಗಾಜಿನ ಮೇಲೆ ಬಿದ್ದ ಮಳೆಹನಿಯ
ಒರೆಸಿಬಿಡುವ ವೈಪರ್‌ನ ಕಾಯ
ಪದರು ಪದರಾಗಿ ಹೆಣೆದ ಸೃಷ್ಟಿ ವಿಶೇಷ ಕಸದಲ್ಲಿ!
ಮೊಟ್ಟೆ ಮಾಗಿ ಒಡೆದು ಜೀವವಾಗುವುದೆಲ್ಲಿ?
ಹಸಿಹಸಿ ಮೊಟ್ಟೆ ಕುಡಿದು ಜೀವ ಬಸಿವ
ನರರಾಕ್ಷಸರ ಈ ರುದ್ರತಾಂಡವ!
ಹೆಣ್ಣು ಭ್ರೂಣಗಳು ಹೆಣವಾಗಿ, ಮಣ್ಣಾಗಿ
ಗಂಡು ಭ್ರೂಣಗಳು ಹಣ್ಣಾಗಿ, ಮಾಗಿ
ಜೀವಂತ ಗಂಡು ಜೀವಕ್ಕೆ
ಅಶರೀರ ಹೆಣ್ಣು ಮರೀಚಿಕೆ
ಉತ್ತರವಿಲ್ಲದೇ ಈ ಘೋರಕೆ ಪ್ರಕೃತಿಯೊಳಗೆ?
ಕಾಲವೇ ಕ್ರಾಂತಿಮಂತ್ರ ಈ ಇಳೆಗೆ!?
*****

















