ಗೋಡೆ ಗೋಡೆಗಳಲಿ
ಅಲಂಕಾರಕ್ಕಿದ್ದ
ಕತ್ತಿ ಚೂರಿಗಳಿಗೆಲ್ಲ
ಹೊಳಪೋ, ಹೊಳಪು
ಹರಿತವಹೆಚ್ಚಿಸುವ
ಭಾರಿ ಹುರುಪು
ಮಸೆವ ಕಲ್ಲಿಗೂ
ಬಿಡುವಿಲ್ಲದ ಕೆಲಸ
ಮನಮನದಲೂ
ಕತ್ತಿ ಮಸೆವ ಬಿರುಸು
ಸೈತಾನದ ಶಕ್ತಿಗೂ
ಮತಾಂಧತೆಗೂ
ಗಳಸ್ಯ ಕಂಠಸ್ಯ
ಮಾನವತೆಗೂ ಬಿರುಕು
ಕ್ರೂರತೆಯ ಥಳಕು
ಮನೆ ಮನೆಯಲೂ
ಬೆಂಕಿ ಚೆಂಡು
ಚೆಂಡಾಟದ ರಭಸಕೆ
ಬಿದ್ದವರೆಷ್ಟೊ, ನರಳಿದವರೆಷ್ಟೋ
ಹೇ ರಾಮ, ಯೇ ಅಲ್ಲಾ
ವಿಶ್ವಪ್ರೇಮ ಇಲ್ಲಾ, ಇಲ್ಲಿ
ಎಲ್ಲಾ, ಎಲ್ಲಾ ಬೊಗಳೆ
ಸ್ಥಿತಿಲಯದ ಅತ್ಯಾಚಾರ
ಬಿಡಿಸಿಟ್ಟ ತೊಳೆ
ಹೊಗೆಯಾಡುತ್ತಲೇ ಇರುವ
ಗುಪ್ತಗಾಮಿನಿ ಈ ಬೆಂಕಿ
ಭಗ್ಗನೆ ಉರಿ ಏಳಲು
ಸಾಕಷ್ಟೆ ಒಂದು ನೆಪ
ಬೈಯ್ಯಾ ಬೆಹನ್ ಅಪ್ಪಾ-ಅಮ್ಮ
ಎಲ್ಲರ ಭಸ್ಮಕೆ ಸಾಕು ಒಂದೇ ಕ್ಷಣ
*****