ಬೊಗಸೆಯಲ್ಲಿನ ನೀರು
ಸೋರಿ ಹೋದರೆ ಏನು?
ತೇವವಿಲ್ಲವೇ ಒಂದಿಷ್ಟು
ಮೊಳಕೆಯೊಡೆಯುವಷ್ಟು?

ಎಷ್ಟೊಂದು ಮಾತುಗಳು
ತುಟಿ ಮೀರಿ ಹೋದರೆ ಏನು?
ಅವ್ಯಕ್ತ ಭಾವಗಳೇ
ಎದೆ ತುಂಬದೇನು?

ಅಲೆಗಳೊಂದೂ
ದಡಕುಳಿಯದಿದ್ದರೇನು?
ಅಪ್ಪಿಲ್ಲವೇ ಮರಳು
ಶಂಖ, ಚಿಪ್ಪಿನೊಂದಿಗೇ ದಡವನು?

ಇಂದು, ನೆನ್ನೆಗಳು
ಇಲ್ಲದಿದ್ದರೆ ಏನು?
ನಾಳೆಗಾಗಿ ನೆವವಿಲ್ಲವೇ
ಬದುಕುಳಿಯಲು?

ಅವರಿವರ ಬದುಕಿನಲಿ
ನಾ ಹಂಚಿ ಹೋದರೆ ಏನು?
ಮಿಕ್ಕಿಲ್ಲವೇ ನಾನು?
ನನಗೆ ನಾನು?
*****