ಎಡಬಿಡದೆ ಸುರಿದ
ಮಹಾ ಮಾರಿ ಮಳೆಗೆ
ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ
ನೆಲಕ್ಕೆ ಕವುಚಿಬಿದ್ದ
ಮರಿ ಹಕ್ಕಿ
ಛಳಿಗೋ, ತೇವಕ್ಕೋ
ಗಡಗಡನೆ ನಡುಗುತ್ತಾ
ರೆಕ್ಕೆ ಬಿಚ್ಚಲಾಗದೇ
ಮತ್ತಷ್ಟು ಮುದುಡುತ್ತಾ
ತನ್ನ ಅಸಹಾಯಕತೆಗೆ ಬಿಕ್ಕುತ್ತಾ

ಮನದೊಳಗೆ ಒಂದೇ ಪ್ರಶ್ನೆ
ಷೇಕ್ಸ್‌ಪಿಯರ್‌ನ ಸೃಷ್ಟಿ
ಹ್ಯಾಮ್ಲೆಟ್‌ನಂತೆ
ಬದುಕಲೋ? ಬದುಕದಿರಲೋ?

ಇದ್ದಕ್ಕಿದ್ದಂತೆ, ಕತ್ತಲು
ಅಮರಿದ ರಾತ್ರಿಯಲ್ಲೂ
ನಿಶಾಂತದ ಮಿಂಚು
‘ಬಾಂದಳವಿನ್ನೂ ಮಿಕ್ಕಿದೆ ಗೆಳತಿ’
ಎನುವ ಮೋಡದಂಚಿನ
ಕೋಲ್ಮಿಂಚು!

ಮುದುರಿ ನಡುಗುವ
ಮರಿಹಕ್ಕಿ
ಕಣ್ಣೆತ್ತಿ ಬಾಂದಳ ದಿಟ್ಟಿಸಿತ್ತು
ಮೋಡ ಸರಿಸಿ
ಮೆಲ್ಲಗೆ ನಗುವ ಶಶಿಯ ಕಂಡಿತ್ತು

‘ಹಿಪ್, ಹಿಪ್, ಹುರ್‍ರೆ’
ಸಂಭ್ರಮದಿ ಕಿರುಚಿತ್ತು
ಮೆಲ್ಲಗೆ ರೆಕ್ಕೆ ಕೊಡವಿ ಬಿಚ್ಚಿತ್ತು
ಕಣ್ಣಂಚಿನ ನೀರೊರೆಸಿ
ಗೆಲುವಿನ ನಗೆ ನಕ್ಕಿತ್ತು!
*****