ಅದಾವ ಕ್ಷಣದಲೊ ಗಮ್ಯತೆ ಸೇರಿ
ಮಾಸವೊಂದರಲ್ಲೇ ಅಸ್ತಿತ್ವ ತೋರಿ
ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ
ನಿನ್ನಾಟ ಒಡಲಲಿ ಬಾರಿ ಮತ್ತೇರಿ
ಸೃಷ್ಟಿಕ್ರಿಯೆಯ ಆ ಕೈಚಳಕ
ಹೊತ್ತು ತಂದಿದೆ ವರ್ಣಿಸಲಾಗದ ಪುಳಕ
ಒದಿವಾಗ ಅವ ಎಡ ಬಲಕ
ರೋಮಾಂಚನದ ಸಿಹಿಸಿಂಚನ ಮನಕ
ನಿನ್ನ ಬರುವಿಕೆಯ ತವಕದಲಿ
ಕ್ಷಣಗಳು ಯುಗವಾಗಿ ಕಳೆಯುತಲಿ
ಮಡಿಲ ತುಂಬುವ ಕನಸಿನಲಿ
ಒಡಲ ಭಾರದಿ ಕುಗ್ಗುತಲಿ
ಮೊಗ್ಗು ಅರಳಿ ನಗುವಾಗ
ಬೀಜ ಮೊಳಕೆಯೊಡೆದು ಸಸಿಯಾದಾಗ
ಮಧುರಾನುಭೂತಿಯ ಸಂಯೋಗ
ಸೃಷ್ಟಿಕ್ರಿಯೆಯ ಹಚ್ಚ ಹೊಸಯುಗ
ಭೂಕಂಪದಲಿ ಧರೆಯ ಒಡಲು ಬಿರಿವಂತೆ
ಕಾನನದಲಿ ಕಾಡ್ಗಿಚ್ಚು ಹತ್ತಿ ಉರಿವಂತೆ
ಜಗದಯಾತನೆಯೆಲ್ಲ ಒಮ್ಮೆಲೆ ಮೇಳೈಯಿಸಿದಂತೆ
ಕಂದನೆ ಒಡಲಿನಿಂದ ಮಡಿಲಿಗಿಳಿದೆ ಪೂರ್ಣಚಂದ್ರನಂತೆ
*****