ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ
ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ
ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು
ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು
ಕೆಲವು ತಾವು ತಾವೇ ತಿಂದವು. ಹೀಗೆ
ಬೀಗಿಕೊಂಡಿವೆ ವಿಕಾರವಾಗಿ ಇವಳ ತೊಡೆಗಳು ಕಾಲುಗಳು
ಈ ನೀಳ ಕೈಗಳು ಪೇಲವ ಬೆರಳುಗಳು
ಕಡಿದಿಟ್ಟಂತೆ ಬಿದ್ದ ಬೃಹತ್ತಾದ ಮೊಲೆಗಳು
ಇಲ್ಲಿ ಮೇಲೆ ಕೆಳಗೆ ಒಳಹೊರಗೆ ಮತ್ತು ಮರೆಗೆ
ಸರಿದಾಡುತ್ತಿದ್ದೇನೆ ದಾರಿ ಹುಡುಕುತ್ತ ಈ ಚಕ್ರಬಿಂಬದಿಂದ
ಹೊರಗೆ ಹೋಗುವ ದಾರಿ ಜನಸಂದಣಿಯ ತಿಣಿಕಿನಲ್ಲಿ
ಎಡೆ ಬಿಡದೆ ಸರಿದು ಬೆರೆತು ಬೆರೆಯಲಾಗದೆ ಸರಿದು
ಒಳಗಿನ ಏಕಾಂತದಲ್ಲಿ ಕುಕ್ಕರಗುಳಿತು ಚಿಂತಿಸುತ್ತೇನೆ:
ಇವಳ ಮತ್ತು ನನ್ನ ಅನೈತಿಕ ಸಂಬಂಧ ಇವಳಿಂದ ಕೊನೆಗೂ
ಪಾರಾಗುವೆನೆಂಬ ವ್ಯರ್ಥ ಹಟ ಮತ್ತೆ ಈ ಕಕ್ಷೆಯಲ್ಲಿ ಸುಳಿದು
ನಡುವೆ ಅಗಾಧ ಗರ್ತ ಗುರುತ್ವಾಕರ್ಷ ಕೊನೆಗೂ
ಹೊಟ್ಟೆಯೊಳಗೆ ವಾಕರಿಕೆಯೆದ್ದು ನಾಯಿಗಳ ಕೂಗಾಗಿ
ಮೂರ್ಛಾವಸ್ಥೆಯಲ್ಲಿ ನಾನು ಶೈವಲಿನಿಯೀಚೆ
ಸತ್ತರೂ ಸತ್ತೆನು ಸತ್ತರೂ ಇವಳ ಗರ್ಭದಲ್ಲಿ
ಹುಟ್ಟಬಹುದು ನನ್ನದೇ ಮಗನಾಗಿ ನನ್ನಂತೆಯೇ ಆಗಿ.
*****