ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು,
ಗೂನು ಬೆನ್ನಿನ ತರುಣಿ
ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು.

ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ,
ತಿವಿಯುತ್ತಾಳೆ
ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು,
ಸುಡುತ್ತಾಳೆ ಬಂದೂಕಿನಿಂದ ಹುಣಸೆಮರಕ್ಕೆ ನೇತಾಕಿದ
ಹಂದಿಗೊಡ್ಡನ್ನು.

ಕ್ರೂರ ಆಶೆಗಳನ್ನು ಸೊಂಟದಲ್ಲಿರಿಸಿಕೊಂಡು ತಿಂದು ಮುಗಿಸುವಳು,
ಕೂರೆಹೇನುಗಳಂತೆ ಗಾಢ ನಿದ್ರೆಯಲ್ಲಿ.

ಕೋಣೆ ತುಂಬಿಕೊಳ್ಳಬಲ್ಲ, ಲಕ್ವಾ ಹೊಡೆದ ಗಡಿಯಾರವನ್ನು
ಬಡಿದೆಬ್ಬಿಸುವ ನಿತ್ಯ ಕಾಯಿಲೆ.

ಇಸ್ತ್ರಿಗೆ ಕೊಟ್ಟಿದ್ದ ಜೀನ್ಸ್‌ಗೌನ್ ಸುಟ್ಟುಹೋದದ್ದರ ಕುರಿತು
ಗ್ರಾಮದ ಕೌನ್ಸಿಲರ್‌ಗೊಂದು ಅಹವಾಲು ಮುಟ್ಟಿಸಲು
ತನ್ನ ನರೆಗೂದಲ ಸಂಗ್ರಹದಿಂದ ಚಂದದ ತುರುಬೊಂದನ್ನು
ಹೆಣೆದಿಟ್ಟುಕೊಂಡಿದ್ದಾಳೆ.

ಹುಳುಕಡ್ಡಿ ಮುಖದ ಪಾದ್ರಿಗೆ
ತನ್ನ ಗದ್ದೆ ಬದುವಿನ ಹಾದಿ ಬಿಟ್ಟುಕೊಡುತ್ತಾಳೆ.
ಅನ್ವನೋ ಮೂತ್ರ ಹೊಯ್ಯುತಾ ಬರುತ್ತಿರುತ್ತಾನೆ,
ಬಿಳಿನಿಲುವಂಗಿಯನ್ನು ಕೊಡವುತಾ ಕುತ್ತಿಗೆಯನ್ನು
ಆಗಸಕ್ಕೆ ತೂರಿ.

ಹಿಮದ ಮಳೆ:
ಗೋಡೆ ಬಿರುಕೊಡೆದಿದೆ, ಗೊಣಗಾಡಿಕೊಂಡು ಮೂಲೆ ಸೇರುತ್ತಾಳೆ,
ಮಾತೃಪ್ರೇಮದ ನಶೆಯಲ್ಲಿ ನೂರಾರು ಹಂದಿಗಳೆನ್ನೆರಬಲ್ಲ
ಯಂತ್ರವಾಗುತ್ತಾಳೆ.

*****