ನಾನು ಯಾವ ನೆಲದಲ್ಲಾದರೂ ನಡೆದಾಡಲಿ
ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ
ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು.
ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ
ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು
ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ್ಚು ಮೆಚ್ಚು
ಆದರೂ ಅವರೇಕೆ ಹೇಳುತ್ತಿದ್ದಾರೆ?
ನನಗೆ ರಾಸ ಪರ್‍ವತವೇ ಪ್ರಿಯವೆಂದು.

ನಾನು ಹಜ್ ಯಾತ್ರೆ ಕೈಕೊಂಡರೂ
ಮದೀನಾದ ನೆಲದಲ್ಲಿ ಪ್ರಾರ್‍ಥಿಸಿದರೂ
ಭಾರತದ ಏಳೆಗಾಗಿಯೇ ಪ್ರಾರ್‍ಥಿಸುವೆನು.
ನನ್ನ ದೇಶದ ಸುಖ ಸಮೃದ್ಧಿಯನೇ ಬಯಸುವೆನು
ನನಗೆ ಆಡಲು ಮಡಿಲು ನೀಡಿದ
ನೀರು, ಆಹಾರ, ಗಾಳಿ ಕೊಟ್ಟು ಪೋಷಿಸಿದ
ಮಾತೃ ಭೂಮಿಯ ಶ್ರೇಯಸ್ಸು ಬಯಸುವೆ.
ನನ್ನ ದೇಹದ ಹನಿ ಹನಿ ರಕ್ತದಲ್ಲೂ
ಭಾರತದ ಹೆಸರೇ ಪ್ರತಿಧ್ವನಿಸುತ್ತಿರುತ್ತದೆ.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಗಡಿಯಾಚೆಯವಳೆಂದು?.

ನನ್ನ ದೇಶದಲ್ಲಿ ನಿರಂತರ ಹರಿಯುತ್ತಿವೆ
ಗಂಗೆ, ಯಮುನೆ, ಕೃಷ್ಣ, ಕಾವೇರಿಯರು
ಪ್ರೀತಿಯ ತಾಜಮಹಲು ನನ್ನ ದೇಶದಲ್ಲಿಯೇ ಇದೆ.
ಚಾರ್‌ಮಿನಾರ್, ಕುತುಬ್‌ ಮೀನಾರ್‌ಗಳು.
ಬದುಕಿರುವೆನು ನಾನು ಕಾಶೀ, ಮಥುರಾ
ಅಜ್ಮೀರ್‌ಬಾಬಾನ ಸೌಹಾರ್‍ದ ನೆಲೆಗಳಲ್ಲಿ
ಸೌಹಾರ್‍ದ ತಾಣ ಸುಂದರ ಹೂಬನ
ಪೋಷಿಸಿದವಳು ನಾನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಕೋಮಲ ಹೂಗಳ ದ್ವೇಷಿಯೆಂದು?

ನಾನು ಲೋಕದ ಯಾವ
ಮೂಲೆಯಲ್ಲಾದರೂ ಕೊನೆಯುಸಿರೆಳೆಯಲಿ
ದೂರದಿಂದಲಾದರೂ ನನ್ನ ಭಾರತದ
ಗಡಿ ಕಾಣುತ್ತಿರಲಿ ಎಂದು ಬಯಸುವೆನು.
ಯಾವ ದೇಶದ ನೀರೇ ಕುಡಿಯಲಿ
ಪವಿತ್ರ ಝಂಝಂ ಸೇವಿಸಿದರೂ ಸಹ
ಅದರಲ್ಲಿ ಗಂಗೆಯ ಸ್ವಾದ ಹುಡುಕುವೆನು.
ಪ್ರಾರ್‍ಥನೆಗೆ ಕೈ ಎತ್ತಿದ ಪ್ರತಿ ಬಾರಿಯೂ
ನನ್ನ ದೇಶದ ಎಳ್ಗೆಯನೇ ಬಯಸುವೆನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಿನ್ನ ಬದ್ಧತೆಯನ್ನು ಸಾಬೀತು ಪಡಿಸು ಎಂದು?
*****