ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು-
ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ
ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ
ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ
ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ
ಗಿಳಿಪಾರಿವಾಳಗಳ ಭ್ರಮಣೆಯನು ಕಂಡು
ಅವ್ಯಕ್ತದಿಂ ವ್ಯಕ್ತ ಹೊರಬರುವ ನಟನೆಯನು
ಚಿಂತಿಸುವುದೆನ್ನಮನ ಬಲು ಬೆರಗುಗೊಂಡು.
ಏನುಳಿವುದೇನಳಿವುದೀ ಒಳಹೊಗುವಾಟದಲ್ಲಿ
ಏನಳಿವುದೇನುಳಿವುದೀ ಹೊರಬರುವಾಟದಲ್ಲಿ?
*****