ಇದ್ದಕ್ಕಿದ್ದ್ಹಂಗ ಮಾಡೋ ಮೋರುಮದೀ ಐಸುರ || ಪ ||

ಅಲೇದೇವರ ಸತ್ತಿತ್ತು
ಭರಮದೇವರು ಹೊತ್ತಿತ್ತು
ಕತ್ತಿ ಫಕ್ಕೀರನಾಗಿ ಯಾಯ್‍ಮೋಮ್ಮಧೀನ್ ಆಂತಿತ್ತು || ಅ. ಪ. ||

ಮಂಡಿಗನಾಳಗ್ರಾಮದಿ ನೋಡಿ
ಮೊರುಮ ಹೋದೀತು ಓಡಿ
ಲಾಡಿಗೆ ದುಡ್ಡಿಲ್ಲ ಬೆಲ್ಲಕ್ಕ ಓದಿಕಿ ಇಲ್ಲ
ಮುಲ್ಲಾನಮಂತ್ರ ಫಸಿಗಿಯಾಗಿ ಹೋಯಿತಲ್ಲ || ೧ ||

ಮುಲ್ಲಾನ ಹೇಣ್ತಿ ನೋಡಿ ಮನಿಗೆ ಹೋದಳು ಓಡಿ
ಎಂಥಾ ಲಗು ತಂದಾಳೋ ಎಡಿ ಊರ ಜನರು ಕೂಡಿ
ಮುಲ್ಲಾ ಓದಕಿ ಮಾಡಿ
ಕೈವಾಲಿಗೆ ಹಾಕ್ಯಾರ ಲಾಡಿ || ೨ ||

ಶಾದತ್ತು ಬಂತು ಓಡಿ
ಸುಡಗಾಡಿಗೆ ಹೋದಿತು ಸಣ್ಣಮಾರಿ ಮಾಡಿ
ಶಿಶುನಾಳಧೀಶ ನೋಡಿ ನಕ್ಕಾನು ನಗಿಮಾಡಿ
ಮೊಹರಮ್ ಹೋಗ್ತದ ಓಡಿ || ೩ ||
*****