ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ!
ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ,
ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು,
ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ
ಒಂದೊಂದೇ ಕಂಡಿ, ಒಂದೊಂದೇ ಗುಳ್ಳೆ, ಒಂದೊಂದೇ ಹುಳುಕು,
ಈಟೀಟಗಲ ಬೆಳೆದು ಕಣ್ಬಿಡುತಾವೆ
ಬೆಳ್ಳಗಿದ್ದ ಬೆಳದಿಂಗಳ ಮೈಮನಸೆಲ್ಲಾ
ಕರೀ ನೆಳ್ಳು ತ್ಯಾಪಿ ಹಚಿಗೆಂಡು ಮುಚಿಗೆಂಡು
ಎಂಥೆಂಥದೋ ಮಾಡರ್ನ್ ಆರ್ಟಾಗಿ ಅರ್ಥಹೀನಾಗ್ತಾವೆ
ಯಾವ್ಯಾವೊ ಹಗ್ಗಾ ಅತ್ತಾಗಿತ್ತಾಗ ಜಗ್ಗಿ
ಈ ಗೊಂಬೀನ ಅಷ್ಟಾವಕ್ರ ಮಾಡ್ತಾವೆ
ಸುತ್ತು ನೂರೆಂಟು ಸೆಳೆದಾರಗಳ ಮಧ್ಯದ ಗೂಟದಂಗೆ
ಕೆಸರಾಗಿನ ಮಣ್ಣಿನಗೊಂಬಿ ಅತ್ತಾಗೆ ಇತ್ತಾಗೆ ಅಂತ
ಪರಿಣಾಮದ ಕಲೆಗಳನ್ನ ಹೊಸದಾಗಿ ಜೋಡಿಸಿಕೊಂತಾತೆ
ಉಬ್ತದೆ, ಕುಗ್ತದೆ, ಹಬ್ತದೆ, ಆದರೂ
ತಂದೇ ಒಂದ ರೀತಿ ಮಕಾ ಮಾಡಿಕೆಂಡು ನಿಲ್ತದೆ
ನಿಂತೇ ಇರ್ತದೆ ಬೀಳೋವರೆಗೆ
ಆ ತಾಯಿ ಈ ತಾಯಿ ಮುತ್ತೈದೇರ ಮಗಾ
ಅನ್ನದೆಲ್ಲಾ ಸುಳ್ಳಾಗಿ ಎಷ್ಟೆಷ್ಟ ಮಂದಿ ಹಾದರದಾಗ
(ಆಹಾರದಾಗ), ಒಂದು ಅಶ್ಲೀಲ ಮುದ್ಯಾಗಿ
ಕರಗಿ ಹೋಗ್ತದೆ, ಎಂದೆಂದಿಗೊ ಬಂದ
ಈ ಕೊಚ್ಚೆ ರೊಚ್ಚೆ ಹೊಳಿಯಾಗೆ
*****