ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ
ಹುಲಿಕರಡಿಗಳಂತೆ ಹೆದರಿಸಬೇಡಿ
ಮರಿಗಿಳಿಯಂತಿವನು
ಕತ್ತಿ ಬಡಿಗೆಗಳನಾಡಿಸಬೇಡಿ
ಬಳ್ಳಿ ಚಿಗುರಿನಂತಿವನು
ಮುಳ್ಳು ಕಲ್ಲುಗಳ ಹರವಬೇಡಿ,
ಹೂಪಾದ ಇವನವು
ಕೋಲಾಹಲದಲೆಯಪ್ಪಳಿಸಬೇಡಿ
ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು
ಉರಿಮಾರಿಯ ಮೆರವಣಿಗೆ ಮಾಡಬೇಡಿ,
ಮರಣದಾಚೆ ನೋಡಿ ಬಂದವನಿವನು
ಅಸಂಬದ್ಧ ಪ್ರೇತಕುಣಿತ ಕುಣಿಯಬೇಡಿ
ಸಹಜನಾಟ್ಯದೊಲೆದಾಡಿದ ಮೈ ಇವನದು
ಅಸಂಗತ ಸಂಗೀತವನರಚಬೇಡಿ,
ದಿವ್ಯಗಾನಕೆ ದನಿಗೂಡಿಸಿ ಹದ್ದಾದವನಿವನು
ನೂರಾರು ಹಗ್ಗಗಳಿಂದ ಬಂಧಿಸಬೇಡಿ,
ಸ್ವಚ್ಛಂದ ಲೀಲೆ ಇವನದು
ಮಾತಿನ ಮೋಡಿಯಲ್ಲಿ ಮುಚ್ಚಬೇಡಿ,
ಮೌನದ ಗವಿಯ ಹೊಕ್ಕು ಬಂದವನಿವನು
ಹೆಣ್ಣಕುಣಿಸಿ ನೋಟ ಕೂಟ ಕಟಿಸೂತ್ರಗಳಿಂದ ಕಟ್ಟಬೇಡಿ
ಬೇರಿನ ಬಿಳಿಹೂವ ನೆತ್ತಿಗೇರಿಸಿ ಮೂಸಿ
ಬಳ್ಳಿ ಬಂಧಕೆಡೆಯಾಗದೆ ಬಯಲಾಡುವನಿವನು
ಇವನು ಪರದವನಾದರೂ ಪರಕೀಯನಲ್ಲ
ನಮ್ಮವನೇ, ದಾರಿ ಬಿಡಿ
ನಿಮ್ಮ ಹತ್ತಿಕ್ಕಿ ಭಂಗಿಸಿ ಸ್ವಂತ ದಾರಿ ಬಿಡಿಸಿಕೊಳ್ಳುವವರೆಗೆ
ಬೇಡ ಬಿಡಿ
*****

















