ದಾರಿತಪ್ಪಿ ನಡೆದರೂ

ಮಾನತಪ್ಪಿ ನುಡಿದರೂ
ತಾಯಿಯಂತೆ ಕ್ಷಮಿಸಿ ನಮ್ಮ
ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ

ಯಾರ ಆಜ್ಞೆಸಲಿಸಲೆಂದು
ರಾಶಿ ಚಿಗುರ ತರುವೆ?
ಯಾರ ಬರವ ಹಾರೈಸಿ
ನೆಲಕೆ ಹಸಿರ ಸುರಿವೆ?
ಯಾರ ಒಲುಮೆ ಉಕ್ಕಿ ಪತ್ರ ಮರಮರದಲು ಬರೆವೆ?

ಹಿಮದ ಹಸ್ತ ಅಳಿಸಿ ತೆಗೆದ
ಜಗದ ಬಾಳ ತಿಲಕವ
ಮತ್ತೆ ಇರಿಸಿ ರತಿಗೆ ಸಲಿಸಿ,
ಜೀವಮೊಳಸುವಾಟವ
ತಿರುಗಿ ತಿರುಗಿ ತೋರುತಿರುವೆ ಕಾಮನೊಂದು ಬೇಟವ!

ಕಾಣದಂತೆ ಮರೆಗೆ ನಿಂತು
ಕಾಯ್ದ ಒಂದು ತತ್ವವ,
ಲೀಲೆಯಲ್ಲಿ ತನ್ನ ಹೀಗೆ
ಮರೆಸಿ ನುಡಿವ ಸತ್ಯವ
ಧ್ವನಿಸುವೆಯೋ ಹೇಗೆ ನೀನು ಸಾವಿಲ್ಲದ ನಿತ್ಯವ?
*****