ನೀನೆಲ್ಲೋ ನಾನೆಲ್ಲೋ
ದೂರದೂರವಾಗಿ
ಕಾಯುವೆವು ಕೂಡಲೆಂದು
ಹೃದಯ ಭಾರವಾಗಿ
ಜೊತೆಯಾಗಿರಲು ಇರುತಿತ್ತೇ
ಇಂಥ ತೀವ್ರಧ್ಯಾನ?
ನೆಲದ ಮಿತಿಯ ಮೀರಿದಂಥ
ಸೂರ್ಯಚಂದ್ರ ಕಾಣದಂಥ
ಕಲ್ಪನೆಗಳ ಯಾನ?
ಇಂಥ ಪ್ರೀತಿಯೊ೦ದಕೇ
ತಾಳಬಲ್ಲ ಕೆಚ್ಚು,
ಬೇಡಿದೊಡನೆ ಬಾರದೆ
ಹಾಗೆಂದೇ ಸಾಯದೆ
ಉಳಿಯುವುದೀ ಹುಚ್ಚು.
ಸಿಕ್ಕೂ ಸಿಗದೆ ಕಾಡುವ
ಪ್ರೀತಿಯನ್ನು ಪಡೆದೆವು,
ತ್ಯಾಗವಿರದೆ ಉಳಿಯದ
ವಿರಹವಿರದೆ ಬೆಳೆಯದ
ಹುಚ್ಚೊಂದನು ಕಡೆದೆವು
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.