ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ
ತರಗತಿ ತುಂಬಾ ತೊಪ್ಪೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಮರದಿಂದ ಬಿದ್ದೂ ಬಾವಿಂದ ಎದ್ದೋ
ಪುತ ಪುತ ಬಂದವು ಎಷ್ಟೊಂದ್ ಮುದ್ದೊ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಕೆಲವರು ಐಗಳು ಕಲವರು ಹೈಕಳು
ಚಕ್ಕಳ ಮಕ್ಕಳ ಕುಂತಿವೆ ಇಕ್ಕಳು
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಒಂದೊಂದ್ ಕಪ್ಪೆಗೆ ಒಂದೊಂದ್ ಪುಸ್ತ್‌ಕಾ
ಒಂದೊಂದ್ ಸ್ಲೇಟು ಒಂದೊಂದ್ ಮಸ್ತ್‌ಕಾ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಚೊಂದೆ ಕಪ್ಪೆ ಯಸ್ಸಾರ್ ಯಸ್ಸಾರ್!
ಗುಳ್ಳೆ ಕಪ್ಪೆ ಅವನೂ ಯಸ್ಸಾರ್!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ರಾಜಾ ಕಪ್ಪೆ ಘಾಯಬ್ ಹೋಕರ್
ಗುಂಕುರ ಕಪ್ಪೆ ವಾಚಾಮಗೋಚರ್!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಒಂಭತ್ತೊಂಬಾತ್ಲಿ ಎಷ್ಟೇಳು ಮರೀ
ಬಿಸಿ ಬಿಸಿ ಇದ್ರೆ ಎಷ್ಟಾದ್ರು ಸರೀ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಸೋಮ್ವಾರ ಹೋದರೆ ಯಾವಾರ ಬರತ್ತೆ?
ನಂಗೊತ್ತು ನಂಗೊತ್ತು, ಬರ್‍ತಾ ಬರ್‍ತಾ ಕತ್ತೆಯಾಗತ್ತೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ನನ್ನಜ್ಜನಿಗೆ ಸಾವಿರ ಕಣ್ಣು! ಏನದು ಏನದು ಬೇಗನೆ ಹೇಳಿ!
ಜೇನಿನ ಪೋಳೆ ಜೇನಿನ ಪೋಳೆ!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ನನ್ನಪ್ಪನಿಗೆ ಮೂರೇ ಕಣ್ಣು! ಏನದು ಏನದು ಬೇಗನೆ ಹೇಳಿ!
ಅಯ್ಯೋ ದೇವರೆ! ತೆಂಗಿನ ಕಾಯಿ!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಹೋಗೊ ಬೆಪ್ಪಾ ಬಾರಿಸು ಗಂಟೆ
ಆಯಿತು ಇಲ್ಲಿಗೆ ಪಾಠದ ತಂಟೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ
*****