ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ
ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ
ನಾನು ಮರುಳಾಗಿ ಕೊಳ್ಳುವವನೇ ಅಲ್ಲ

ಮನೆಯಂಗಳದ ಹೂವು, ಹೂದೋಟದ ಹೂವು
ಬೆಟ್ಟದ ಹೂವು, ಕೊಳ್ಳದ ಹೂವು,
ಏರ್ ಕಂಡೀಶನ್ ಹೂವು, ಬಣ್ಣವಾಸನೆಗಳ ಹೂವು,
ಎಷ್ಟೊಂದು ಹೂವುಗಳು- ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ-

ಸುಳಿ ಸುಳಿಗೆ ಸಿಕ್ಕು ಅರಳದೇ ಉಳಿದ
ಬಿಸಿ ಬಿಸಿಲಿಗೆ ಸುಟ್ಟು ಹೂವಾಗಲು ಹಂಬಲಿಸಿದ
ನೀರು ಬೆಳಕಿಲ್ಲದೆ ಗಾಳಿ ಮೋಡಗಳೊಡನೆ
ಹನಿ ಮುತ್ತು ಚೆಲ್ಲಿ ಮಾತಾಡಿ ತತ್ತರಿಸಿದ
ತಲ್ಲಣಿಸಿದ ಹೂವು ಇಲ್ಲೆಲ್ಲಾದರೂ ಇದೆಯೇ
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ನನ್ನೊಲುವಿನ ಹೂವು ಎಲ್ಲೋ ಇದೆ
ಸರಿ ಸಾಟಿಯಾಗಬಲ್ಲ ಹೆಸರೊಂದೂ ಗೊತ್ತಿಲ್ಲ
ನೋವು ನಲಿವಿನಲಿ, ದುಃಖ ದುಮ್ಮಾನಗಳಲಿ
ಮುಳ್ಳುಗಳನೆಲ್ಲ ಕಳಚಿ ನಗುತ ಬೆರೆವ
ನನ್ನೆದೆಯ ಗೂಡಿನ ಹೂವು ಎಲ್ಲಾದರೂ ಇದೆಯೇ!
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ಸುತ್ತೆಲ್ಲ ಮುಳ್ಳುತುಂಬಿದ ಹೆಸರು ಬಣ್ಣಿಲ್ಲದ
ಹೂವಿಗೆ ಕಾತರಿಸಿ ಬಯಸಿ ಕಾದಿರುವೆ
ಅದರೊಂದಿಗೆ ಸೇರಿ ಉಸಿರು ಬೆರೆಸಿ
ಮಿಂಚು ಹರಿಸಿ ಮೋಡ  ಸುರಿಸಿ
ಬಣ್ಣ ಸುಗಂಧ ತುಂಬಿ ನನ್ನೆದೆಯ
ತುಡಿತಕೆ ರಾಣಿಯಾಗುವ ಹೂವ
ಹುಡುಕಿ ಹುಡುಕಿ ಹೊರಟಿದ್ದೇನೆ ಅಲ್ಲಲ್ಲಿ-
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಸಿಗಲಿಲ್ಲ.
*****