ತನು ಕರಗಿತ್ತು. ಮನ ನಿಂದಿತ್ತು.
ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು.
ಮನ ಪವನ ಬಿಂದು ಒಡಗೂಡಿತ್ತು.
ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು.
ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು.
ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು.
ಕರಣಂಗಳೆಲ್ಲ ಉರಿದು ಹೋಯಿತ್ತು.
ಸಪ್ತ ಧಾತು ಕೆಟ್ಟಿತ್ತು. ರಸವರತಿತ್ತು.
ಅಪ್ಪು ಬರತಿತ್ತು. ಕಟ್ಟಿ ಹಾಯ್ದ ಬಿಂದಿನಂತೆ
ತೊಟ್ಟು ಬಿಟ್ಟು, ಬಟ್ಟಬಯಲೊಳಗೆ ಬಿದ್ದು,
ನಾನೆತ್ತ ಹೋದೆನೆಂದರಿಯೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****