ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ
ನನ್ನೆಲ್ಲ ಕೊರಗಿಗೂ ಕೊನೆಯ ತಂದ.

ಹರಿಯ ತಲೆಮೇಲಿತ್ತು ನವಿಲಿನ ಕಿರೀಟ
ಹೊಳೆವ ಪೀತಾಂಬರ ಮೈಯ ಮೇಲೆ,
ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ
ಕಸ್ತೂರಿ ತಿಲಕ ಹಣೆಯ ಮೇಲೆ

ರಾಧೆ ನಾ ನಾಚಿದೆ ಕರಗಿ ನೀರಾದೆ
ನಲ್ಲ ತಾನೇ ಬಂದ ನನ್ನ ಮನೆಗೆ
ಕನಕಾಂಬರೀ ಬಣ್ಣ ಪತ್ತಲವ ಉಟ್ಟೆ
ಕಪ್ಪು ರವಿಕೆಯ ತೊಟ್ಟು ಬಂದೆ ಹೊರಗೆ

ಆಹ ಎಂಥ ಚೆಲುವ ಕೃಷ್ಣ ಗಿರಿಧರನು
ಎಂಥ ಮೋಹನನೇ ಯಶೋದೆ ಮಗನು
ಇಂಥ ನಲ್ಲ ನನಗೆ ಹೇಗೆ ದೊರಕಿದನೇ
ಬೇರೆ ಯಾರೇ ಇವನ ಸಮನಿರುವನು

ಬಾಚಿದ ಕಣ್ಣಲ್ಲೆ ಚಾಚಿ ತನ್ನಧರವ
ನಾಚುತ್ತಿದ್ದ ನನ್ನ ಸೆಳೆದೆ ಬಿಟ್ಟ
ತೋಚಲಿಲ್ಲ ಏನೂ, ದಿಗ್ಭ್ರಾಂತಿ ಸಂಭ್ರಮ
ಆಚೀಚೆ ಜನ ನೋಡಿ ಏನಂದರೋ
*****