ಹಾದರ ಮಾಡಿದೆನೇ ನಾನೊಂದು ಹಾದರಮಾಡಿದನೇ ||ಪ||

ಹಾದರ ಮಾಡಿದೆ ಹಗಲಿರುಳೆನ್ನದೆ
ಸಾಧು ಸತ್ಪುರುಷರ ಪದರಿನೊಳಗೆ ನಾ ಹಾದರಮಾಡಿದೆನೇ ||ಅ.ಪ.||

ಮಳ್ಳಿಯ ತೆರದಲ್ಲಿ ಮಾತುಗಳ ಆಡುತೆ
ಕಳ್ಳರೊಳಗೆ ಸುಳದೆ ಹಳ್ಳಕೊಳ್ಳ ಹಾಳಗ್ವಾಡಿ ಮಳಗಿಯೊಳು
ಉಳ್ಳಾಡಿ ಬ್ಯಾಸತ್ತು ಒಳ್ಳೇಕಿ ಅನಿಸುವ ||೧||
ಆರು ಮೂರು ವರಗೇಡಿ ಪುರುಷರೋಳು
ದಾರಿತಪ್ಪಿ ನಿಂತೆ ದೂರಿಲೆ ಕಣ್ಣಿಟ್ಟವರನ್ನು ಬಿಡಲಿಲ್ಲ
ವಾರಿಗೆ ಹುಡುಗರೊಳು ಕ್ಯಾರಿ ಉಗುಳುತಲಿ ||೨||

ಪ್ಯಾಟಿ ಪಟ್ಟಣ ಹಳ್ಳಿ ದಿಲ್ಲಿಯೊಳು ಕೋಟಿ ಜನರ ಕೂಡಿದೆ
ದಾಟಿದೆ ಈ ಜಾರತನದಲ್ಲಿ ಜನ್ಮ
ಘಟದೋರಿತು ಶಿಶುನಾಳಧೀಶನೊಳಗೆ ನಾ ||೩||

****