ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಏನು ನಡೆಯಿತೊ ಸಂಜಯ
ಯಾರು ಸೋತರು ಯಾರು ಗೆದ್ದರು
ಎಲ್ಲ ಬಣ್ಣಿಸೊ ಸಂಜಯ

ಯಾರ ಬಾಣಕೆ ಯಾರು ಗುರಿಯೊ
ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ
ಯಾರು ತಪ್ಪೊ ಯಾರು ಸರಿಯೊ
ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ

ಧರ್ಮ ಯುದ್ಧವೊ ಕರ್ಮ ಯುದ್ಧವೊ
ದೈವ ನಿರ್‍ಮಿಸಿದಂಥ ಯುದ್ಧವೊ ಸಂಜಯ
ಎಲ್ಲ ಯುದ್ಧಗಳಾದಿ ಯುದ್ಧವೊ
ಎಂದಿಗೂ ಮುಗಿಯದನಾದಿ ಯುದ್ಧವೊ ಸಂಜಯ

ಯುಗವು ಕೊನೆಗೊಳ್ಳುವುದು ಹಾಗೆಯೊ
ಮುಂದಿನದು ಮೊದಲಾಗುವುದು ಹೀಗೆಯೊ ಸಂಜಯ
ಒಂದರೊಳಗಿನ್ನೊಂದು ಬೇಗೆಯೊ
ಜಾದುಗಾರನು ಎಬ್ಬಿಸಿದ ಹೊಗೆಯೊ ಸಂಜಯ

ಕಾಲದ ಮಹಾಚಕ್ರವುರುಳಿಕೊ
ಈ ಮಹಾಭಾರತವ ಮೆಟ್ಟಿ ಹೋಯಿತೊ ಸಂಜಯ
ಕ್ರಾಂತಿಯಾಯಿತೊ ಶಾಂತಿಯಾಯಿತೊ
ಕಣ್ಕಟ್ಟಿನ ವಿಭ್ರಾಂತಿಯಾಯಿತೊ ಸಂಜಯ
*****