ಅಂದುಕೊಂಡಷ್ಟು ಚಳಿ ಏನಲ್ಲ! ಗಾಳಿ ಬಿರುಸು
ನೆಪಕ್ಕೆ ಮಧ್ಯಾಹ್ನ ಆದರೆ ಅಡ್ಡಮಳೆ
ಬೆಟ್ಟದ ಹಸಿರುವಾಸನೆಯೊಳಗೆ
ಪುಕ್ಕಟೆ ಸಿಗುವ ಆಕ್ಸಿಜನ್, ಕುಣಿವ ಸಂಭ್ರಮ
ಆ ಬೆಟ್ಟ ಈ ಬೆಟ್ಟ ಮತ್ತೊಂದು ಬೆಟ್ಟ
ಅವರ ಬಿಟ್ಟು ಇವರ ಬಿಟ್ಟು ನೀನ್ಯಾರು?

ಬೀಡುಬಿಟ್ಟ ಮುಸ್ಸಂಜೆಗೆ
ಕಾಫಿಯದೋ ಕಿಂಗ್‍ಫಿಶರದ್ದೋ ನಗು
ಬೆಟ್ಟದಿಳಿಜಾರಿನ ಮಿನಿ ಮಿನಿ
ಮಿನುಗುವ ದೀಪಗಳ ಕಣ್ಣುಮುಚ್ಚಾಲೆ
ಮೇಲೆಲ್ಲ ಮಂಜುಹೊಗೆಯ
ಓಟದ ಸ್ಪರ್ಧೆಯೇನೋ!
ಶಾಲು ಕೋಟುಗಳೊಳಗೂ ಚಳಿ
ಹುರಿದಕಾಳು ಕುರುಕಲ ಹಪ್ಪಳದ ಶಬ್ದ
ಅದೆಂತಹ ಮೃದು ಅದೆಂತಹ ಹಗುರು
ಅದೆಂತಹ ಸ್ಪರ್ಶ ಅದೆಷ್ಟು ಸೊಗಸು ಈ ಮಾದಕ ಮಂಜು!

ಟೇಬಲ್‌ಮೇಲೆ ಚಿಕನ್‌ಕರಿ
ಬಿಸಿಚಪಾತಿ ತಂದಿಟ್ಟ ಮಾಣಿಗೆ
ಟಿಪ್ಸ್ ಎಷ್ಟಿಡಬಹುದೆನ್ನುವ ಕಾತುರ
ಕಿಟಕಿ ಗ್ಲಾಸಿನ ಹೊರಗೆ ಬೆಕ್ಕು
ಎಲುಬಿಗೆ ತಿಣುಕಾಡುವ
ಮೆತ್ತೆನೆಯ ಕಳ್ಳ ಧ್ವನಿ

ಮಂಜುಕವಿದ ಮುಂಜಾವಿಗೆ
ಸೂರ್ಯ ತೆವಳುತ್ತ ಮೇಲೆದ್ದದ್ದು
ಕಿಟಕಿಯಾಚೆ ಗರಿಕೆ ಹೂವುಗಳಿಗೆ
ಸ್ಫಟಿಕ ಹರಳುಗಳ ಕೂಡಿಡುವಿಕೆಯ ಆಟ
ತುಂಬಿನಿಂತ ಕೆರೆಯೊಳಗೆ
ಸ್ನಾನಕ್ಕಿಳಿದು ಹುಡುಗಿಯರ ಛೇಡಿಸುವ ಸೂರ್ಯ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)