ನಾಚಿಕೆಯೆ ಹೀಗೇಕೆ ಹಗೆಯಾಯಿತು
ನನ್ನ ಉರಿಸುವ ಕ್ರೂರ ಧಗೆಯಾಯಿತು?

ಹರಿಯು ತಬ್ಬಿದ್ದಾಗ ಅವನ ಚೆಲುವ
ನೋಡುತ್ತ ಬೆರಗಾಗಿ ಮೂಕಳಾದೆ
ನಿನ್ನ ಜೊತೆ ಮಧುರೆಗೆ ನಾನು ಕೂಡ
ಬರುವೆ ಎಂದೇಕೆ ನಾ ಹೇಳದಾದೆ?

ಏನು ನಿಷ್ಕರುಣಿ ಆ ಕಂಸದೂತ!
ಅಕ್ರೂರನಲ್ಲ ಅವ ಕ್ರೂರದೂತ
ಗೋಕುಲದ ನಿಧಿಯನೇ ಕೊಂಡುಹೋದ
ಹಾಲಗಡಿಗೆಗೆ ಹುಳಿಯ ಹಿಂಡಿ ಹೋದ

ಗೋಕುಲದ ಆತ್ಮ ಈ ನೆಲವ ತೊರೆದು
ಹೋಗುವಾಗೇಕೆ ನಾ ಹಾಗೆ ನಿಂತೆ?
ಹರಿಯ ವಿರಹದಿ ಸೀಳಿಹೋದ ಹೃದಯ
ಉರಿಯುತಿದೆ ಎಂದಿಗೂ ಮಾಯದಂತೆ.
*****