ಬಂದ ಅಗೋ ಮರಿಯಾನೆ ಬಣ್ಣದ ಹೂವೀಣೆ
ಇಂಥ ಚಿಣ್ಣ ಇನ್ನೊಬ್ಬನ ಜಗದಲಿ ನಾ ಕಾಣೆ
ನೀರಿರಲಿ ನೆಲದಲ್ಲೇ
ಈಜುವ ಈ ಧೀರ,
ಬೆಣ್ಣೆಯೇನು ಮಣ್ಣನ್ನೂ
ಚಪ್ಪರಿಸುವ ಪೋರ!
ಕರೆದೆಲ್ಲಾ ಹೆಣ್ಣುಗಳ
ಉಡಿಗೇರುವ ಮಾರ,
ಜಾಜಿಗಿಂತ ಹಗುರ ಈ
ಹೂಗೆನ್ನೆ ಪೋರ.
ನಕ್ಕನೊ ಇವ ಚಪ್ಪರದಲಿ
ಮಲ್ಲಿಗೆ ಸುರಿದಂತೆ,
ಅತ್ತನೊ ಆ ಮಲೆನಾಡಿನ
ತೊರೆಗಳ ಹರಿದಂತೆ,
ಆಡುತ್ತಿರೆ ಚಳಿದಿನದ
ಬೆಚ್ಚನೆ ಬಿಸಿಲಂತೆ,
ಜೊತೆಗಿರಲು ದಿನ ದಿನವೇ
ಸರಿವುದು ಕ್ಷಣದಂತೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.