ವಿಕಾಸ್ ಎಲ್ಲಿದ್ದೀರಾ, ಹೇಗಿದ್ದೀರಾ, ನನ್ನ ನೆನಪು ನಿಮಗಿದೆಯೇ, ಕಣ್ಮುಚ್ಚಿ ಮಲಗಿದ್ದವಳಿಗೆ ಅನು ಬಂದು ಎಚ್ಚರಿಸಿದಾಗಲೇ ಎಚ್ಚರವಾದದ್ದು. ಎಷ್ಟು ಹೊತ್ತು ಮಲಗಿಬಿಟ್ಚೆ. ಇಡೀ ರಾತ್ರಿ ನಿದ್ರೆಯಿಲ್ಲ. ಬೆಳಿಗ್ಗೆ ಅಷ್ಟೆ ಜೊಂಪು ಪಾಪ ಅನುಗೆ ಲೇಟಾಗಿ ಹೋಯಿತೇನೋ ದಡಬಡನೆ ಎದ್ದು ಅಡುಗೆ ಮನೆಗೆ ಧಾವಿಸಿದಳು.
“ಅನು, ಸಂಜೆ ನಿಮ್ಮಾಫೀಸಿನ ಹತ್ತಿರ ಬರ್ತೀನಿ” ಯಾವುದಕ್ಕೋ ಮುನ್ನುಡಿ ಹಾಕಿದಳು ನೀಲಾ. ಶಾಪಿಂಗ್ ಇರುವಾಗಲೆಲ್ಲಾ ನೀಲಾ ಅನುವಿನ ಆಫೀಸಿನ ಹತ್ತಿರವೇ ಹೋಗಿ ಕಾದಿರುತ್ತಿದ್ದಳು. ಆಫೀಸ್ ಮುಗಿದ ಮೇಲೆ ಅಮ್ಮನನ್ನು ಪೇಟೆಗೆ ಕರೆದೊಯ್ದು, ಅವಳ ಖರೀದಿಗೆಲ್ಲ ಜೊತೆಯಾಗಿ, ಹೋಟೆಲ್‌ಗೆ ನುಗ್ಗಿ ಸಿಕ್ಕಿದ್ದನ್ನು ತಿಂದು ಬರುವುದು ವಾಡಿಕೆಯಾಗಿತ್ತು. ಇಂದು ಕೂಡ ಹಾಗೆ ಎಂದು ಭಾವಿಸಿ
“ಐದು ಗಂಟೆಗೆ ಸರಿಯಾಗಿ ಬಂದುಬಿಡು. ಕಾಯ್ತಾ ಇರ್ತೀನಿ. ತಡ ಮಾಡಬೇಡ” ತಾಕೀತು ಮಾಡಿ ಹೊರಟಳು.
ಸಂಜೆಯಾದೊಡನೆ ಸುಶ್ಮಿತಳಿಗೆ ತಾನು ಇಂದು ಶಾಪಿಂಗ್‌ಗೆ ಹೋಗುವುದಾಗಿ ತಿಳಿಸಿ ಐದು ನಿಮಿಷ ಮೊದಲೇ ಆಫೀಸ್ ಬಿಟ್ಟಳು. ಅವಳು ಹೊರ ಬರುವುದಕ್ಕೂ ನೀಲಾ ಕಾರಿನಿಂದಿಳಿಯುವುದಕ್ಕೂ ಸರಿಯಾಯಿತು. ಡ್ರೈವರಿಗೆ ಹೋಗೆಂದು ತಿಳಿಸಿ ಮಗಳತ್ತ ಹೆಜ್ಜೆ ಹಾಕಿದಳು. ಮಗಳ ಹಿಂದೆ ಕೈನಿಯಲ್ಲಿ ಕುಳಿತು ಹೋಗುವುದೆಂದರೆ ನೀಲಾಳಿಗೆ ಅದೇನು ಉತ್ಸಾಹ, ಉಲ್ಲಾಸ. ತಾನಂತೂ ಇಂಥದನ್ನೆಲ್ಲ ಕಲಿಯಲಾಗಿರಲಿಲ್ಲ. ಅಪ್ಪ ಇಂತಹದಕ್ಕೆ ಒಪ್ಪುತ್ತಲೇ ಇರಲಿಲ್ಲ. ಕಾಲವೂ ಹಾಗೆಯೇ ಇತ್ತಲ್ಲ.
ಹೆಣ್ಣು ಮಕ್ಕಳು ಕಾಲೇಜು ಮೆಟ್ಟಿಲು ಏರುವುದೇ ಸಾಹಸವಾಗಿತ್ತು. ಅಪ್ಪ, ಮಗಳು ವಿದ್ಯಾವಂತೆ ಆಗಲೇಬೇಕೆಂದು ತನ್ನನ್ನು ಕಾಲೇಜಿಗೆ ಕಳುಹಿಸಿದ್ದರು. ಈಗಂತು ಕಾಲ ಅದೆಷ್ಟು ಬದಲಾಗಿದೆ. ಹೆಣ್ಣು ಅನ್ನೋ ಕೀಳರಿಮೆ ಇಲ್ಲವೇ ಇಲ್ಲ. ನಮ್ಮ ಅನುನೇ ಹೇಗಿದ್ದಾಳೆ. ಅಪ್ಪನ ಅಸ್ತಿ ಬೇಕಾದಷ್ಟಿದ್ದರೂ ಸ್ವಾಭಿಮಾನಿ, ಇಂಜಿನಿಯರಿಂಗ್ ಮುಗಿಸಿದಳು. ಈಗ ಸ್ವಂತ ಆಫೀಸ್ ತೆರೆಯುವ ಅವಕಾಶವಿದ್ದರೂ ಸಂಬಳಕ್ಕಾಗಿ ಬೇರೆಯವರ ಬಳಿ ಕೆಲಸ ಮಾಡುತ್ತಿದ್ದಾಳೆ. ಬಲು ಧೈರ್ಯದ ಹುಡುಗಿ. ಜೀವನದಲ್ಲಿ ಖಂಡಿತಾ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತಾಳೆ. ಮಗಳ ಬಗ್ಗೆ ಹಮ್ಮೆ ಉಕ್ಕಿ ಬಂತು. ಅಭಿಮಾನದಿಂದ ಮಗಳ ಸೊಂಟ ಬಳಸಿದಳು.
“ಯಾವ ಕಡೆ ಹೋಗಬೇಕಮ್ಮ” ಕೈನಿ ನಡೆಸುತ್ತಲೇ ಅನು ಕೇಳಿದಳು.
“ಎಲ್ಲಾದರೂ ಕೂತ್ಕೊಂಡು ಮಾತಾಡೊ ಕಡೆ ನಡೆ. ಹೆಚ್ಚು ಜನ ಇರಬಾರದು” ಅವಳಿಗೆ ಕೇಳಿಸುವಂತೆ ನುಡಿದಳು.
ಗಾರ್ಡನ್ ರೆಸ್ಟೋರೆಂಟ್ ಮುಂದೆ ಗಾಡಿ ಪಾರ್ಕ್ ಮಾಡಿದಳು. ಮೌನವಾಗಿ ನಡೆದು ಮೂಲೆಯೊಂದರ ಜಾಗವನ್ನು ಆರಿಸಿ “ಕೂತ್ಕೊ ಅಮ್ಮ. ಇಲ್ಲಿ ಹೆಚ್ಚು ಜನ ಇರೊಲ್ಲ. ನೀನು ಧಾರಾಳವಾಗಿ ಮಾತಾಡಬಹುದು” ಮೊಗ ಗಂಭೀರವಾಗಿತ್ತು. ಆ ಗಂಭೀರತೆ ನೀಲಾಳನ್ನು ಆಧೀರಗೊಳಿಸಿತು.
ಅನುವಿಗೆ ಸ್ಪಷ್ಟವಾಗಿ ತಿಳಿಯಿತು ಆಮ್ಮ ಯಾಕೆ ಬಂದಿದ್ದಾಳೆ ಇಲ್ಲಿ, ಅವಳು ಏನು ಹೇಳಬೇಕು ಅಂತ ಬಯಸಿದ್ದಾಳೆ ಅನ್ನೋ ಸ್ಪಷ್ಟ ತಿಳುವಳಿಕೆ ಮನಸ್ಸಿಗೆ ಹೊಳೆದುಬಿಟ್ಟಿತ್ತು.
ತಾಯಿಯನ್ನು ಕೇಳದೆ ಸ್ಯಾಂಡ್‌ವಿಚ್‌ಗೆ ಆರ್ಡರ್ ನೀಡಿದಳು. ಜೊತೆಗೆ ಗೋಬಿ ಮಂಚೂರಿ ತರಲು ತಿಳಿಸಿ, ಅಮ್ಮನೆಡೆ ತಿರುಗಿ,
“ಈಗ ಹೇಳಮ್ಮ, ಅದೇನು ಮನೆಯಲ್ಲಿ ಹೇಳಲಾರದಂತಹ ಗಹನ ಗಂಭೀರ ವಿಷಯ ಅಂತ.”
“ಅದೂ, ಅದೂ, ಅದೇ ಅನು, ನಿನ್ನೆ ಬಂದಿದ್ರಲ್ಲ ಸ್ವಾಮಿನಾಥ್ ಫ್ಯಾಮಿಲಿ ಹೇಗೆನಿಸಿತು” ಉಗುಳು ನುಂಗುತ್ತ ನಿಧಾನವಾಗಿ ಕೇಳಿದಳು.
“ತುಂಬಾ ಒಳ್ಳೇ ಫ್ಯಾಮಿಲಿ ಆಮ್ಮ. ರಾಕೇಶ್ ಕೂಡ ಅಷ್ಟೆ, ಜಂಟ್ಲ್‌ಮನ್” ಭಾವನೆಗಳಿಲ್ಲದ ಸ್ವರದಲ್ಲಿ ನುಡಿದಳು.
“ಹಾಗಾದರೆ ನಿಂಗೂ ಒಪ್ಟಿಗೆ ಅಂತಾ ತಿಳಿಸಿಬಿಡಲಾ” ಖುಷಿಯಿಂದ ನೀಲಾ ಕೇಳಿದಳು.
“ಒಪ್ಪಿದ್ದೀನಿ ಅಂತಾನಾ.”
“ಮತ್ತೇನೇ ನಿನ್ನ ಮಾತಿನ ಅರ್ಥ” ಪೇಲವವಾಗಿ ಕೇಳಿದಳು.
“ನಿಂಗೆ ಮೊದಲೇ ನಾನು ಹೇಳಿರಲಿಲ್ಲವೆ. ಈ ಮದುವೆ, ಈ ಸಂಪ್ರದಾಯಗಳೆಲ್ಲ ನಂಗೆ ಇಷ್ಟ ಇಲ್ಲ ಅಂತಾ. ಮತ್ತೂ ಮತ್ತೂ ಯಾಕೆ ನನ್ನ ಬಲವಂತ ಮಾಡ್ತಿಯಾ.”
“ಹಾಗಂದ್ರೆ ಹೇಗೆ ಅನು. ನನ್ನ ಜೀವನದಲ್ಲಿ ಉಳಿದಿರೋ ಏಕೈಕ ಆಸೆಯ ಕಿರಣವೇ ನಿನ್ನ ಮದುವೆ ಕಣೆ. ನೀನು ಮದ್ವೆ ಆಗಿ ಸಂತೋಷವಾಗಿ ಗಂಡನ ಜೊತೆ ಇರಬೇಕು. ನಿನ್ನ ಮಗುನ ಎತ್ತಿ ಆಡಿಸಬೇಕು ಅನ್ನೋದೆ ಕಣೆ. ನನ್ನ ಮನದ ಬಯಕೆ. ಪ್ರತಿಯೊಬ್ಬ ತಾಯಿ ತಂದೆ ಕೂಡ ತಮ್ಮ ಮಕ್ಕಳ ಬಗ್ಗೆ ಬಯಸೋ ಆಸೆ ಕನಸುಗಳು ಕಣೆ ಇದು. ಹೆತ್ತವರೂ ಮಕ್ಕಳಿಂದ ಇದನ್ನೇ ಅಲ್ವಾ ಬಯಸೋದು ಆನು.”
“ನೀನು ಹೇಳೋದೆಲ್ಲಾ ಸರಿನೇ ಅಮ್ಮ. ಆದ್ರೆ ನನ್ನ ಬಗ್ಗೇನೂ ನೀನು ಯೋಚನೆ ಮಾಡಬೇಕು ಅಲ್ವಾ. ಎಲ್ಲರಂತೆ ನಿನ್ನ ಮಗಳು ಬೆಳೆಯಲಿಲ್ಲ ಅನ್ನೋ ಸತ್ಯ ನೀನು ಮರೆಯೋ ಹಾಗಿಲ್ಲ.”
“ಪದೇ ಪದೇ ಅದೇ ನವೆ ಹೇಳಿ ನನ್ನ ಹಿಂಸಿಸಬೇಡ ಅನು, ಇಂಥ ಪರಿಸ್ಥಿತಿ ಮಧ್ಯ ಬೆಳೆದಿರೋ ಎಷ್ಟು ಮಕ್ಕಳು ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಂಡಿದ್ದಾರೆ ಅನ್ನೋದು ನಿಂಗೂ ಗೊತ್ತಿದೆ” ಕಠಿಣತೆ ತಂದುಕೊಂಡಳು ನೀಲ.
“ಕೋಪ ಮಾಡ್ಕೊಬೇಡ ಅಮ್ಮ. ಗಂಡ ಸಂಸಾರ ಅಂದ್ರೆ ಈ ಮನಸ್ಸಿನಲ್ಲಿ ಮಧುರಾನುಭೂತಿಯ ತರಂಗಗಳೇಳುವುದಿಲ್ಲ. ಯಾವುದೇ ಪುರುಷ ನನ್ನ ಅಂತರಂಗದ ಭಾವಗಳನ್ನು ಕದಲಿಸಿಲ್ಲ ಇದುವರೆಗೂ. ಪ್ರತಿಯೊಂದು ಹೆಣ್ಣಿಗೂ ಇರಬೇಕಾದ ಸಹಜ ಸ್ಪಂದನ ನನ್ನಲಿಲ್ಲ. ಯಾಕಮ್ಮ ಯಾವ ಹೆಣ್ಣಿಗೂ ಇಲ್ಲದೇ ಇರೋ ಈ ಭಾವ ಇಂತಹ ಮನಸ್ಥಿತಿ ಇರೋ ನಾನು ಯಾವ ಪುರುಷನೊಂದಿಗೆ ಸ್ತ್ರೀಯಾಗಿ ಇರಬಲ್ಲೆ. ಮನಸ್ಸುಗಳ ಮಿಲನವಾಗದ, ಅನುರಾಗ ಮೂಡದೆ ಮದ್ವೆ ಮಾಡ್ಕೊಂಡು ಇನ್ನೊಬ್ಬಳು ನೀಲಾ ಆಗಲಾ, ಮತ್ತೊಬ್ಬ ಅನುವಿನ ಸೃಷ್ಟಿಗೆ ಕಾರಣ ಆಗಲಾ ಹೇಳು ಅಮ್ಮ. ನನ್ನ ಕಟ್ಟಿಕೊಂಡ ಗಂಡನಿಗೂ ನ್ಯಾಯ ಸಲ್ಲಿಸದೆ ನಾನೂ ನೆಮ್ಮದಿ ಕೆಡಿಸಿಕೊಂಡು ಇಬ್ಬುಗೆಯ ಬದುಕಿನಲ್ಲಿ ಜೀವಂತವಾಗಿ ದಹಿಸಿ ಹೋಗಲಾ ಅಮ್ಮ. ಮದ್ವೆಯಿಂದ ನಾನು ಸುಖವಾಗಿರಲ್ಲ ಅನ್ನೋ ಸತ್ಯ ಗೊತ್ತಿದ್ದೂ ನಾನೇ ನನ್ನ ಸುಖವನ್ನು ದೂರ ಮಾಡಿಕೊಳ್ಳಲಾ.”
“ಅನು, ಅನು ನೀ ಯಾಕೆ ಇಷ್ಟೊಂದು ಸೂಕ್ಷ್ಮ ಮನಸ್ಸಿನವಳಾದೆ ಅನು. ಎಂದೋ ಯಾರೋ ಸುಖವಾಗಿಲ್ಲ ಅನ್ನೋ ಕಾರಣಕ್ಕೆ ನಿನ್ನ ಭವಿಪ್ಯವನ್ನೇ ಹಾಳು ಮಾಡಿಕೊಳ್ಳುತ್ತಾ ಇದ್ದೀಯಲ್ಲೆ. ಎಲ್ಲರೂ ಜಗದೀಶನಂತಹವರೇ ಇರಲ್ಲ ಕಣೇ. ವಿಕಾಸನನ್ನು ಮರೆಯಲಾರದ ನೋವಿನಲ್ಲಿ ನನ್ನ ಬದುಕನ್ನು ನಾನೇ ಹಾಳು ಮಾಡಿಕೊಂಡೆ. ವಿಕಾಸ ಇನ್ನು ಮನಸ್ಸಿನಲ್ಲಿದ್ದಾರೆ ಅಂತಾ ನಿಮ್ಮ ಅಪ್ಪನಿಗೆ ನನ್ನ ಮೇಲೆ ಅಸಹನೆ. ಇಂತಹ ಪರಿಸ್ಥಿತೀಲಿ ನೀನಿಲ್ಲವಲ್ಲ ಅನು” ವ್ಯಥಿತಳಾಗಿ ದೀನಳಾಗಿ ಕೇಳಿದಳು.
“ಅಮ್ಮ ಮದುವೆನೇ ಅಂತಿಮ ಗುರಿ ಅಂತ ಯಾಕಮ್ಮ ನೀನು ಅಂದ್ಕೋಬೇಕು. ಮದ್ವೆ ಇಲ್ಲದ ಹೆಣ್ಣಿನ ಜೀವನ ಬೆಂಗಾಡು ಅನ್ನೋ ಕಲ್ಪನೆಯನ್ನು ನಿನ್ನ ಮನಸ್ಸಿನಿಂದ ಕಿತ್ತುಹಾಕು. ಕಾಲ ಬದಲಾಗಿದೆ. ನನ್ನಂಥ ಮನಸ್ಥಿತಿಯ ಎಷ್ಟೋ ಹೆಣ್ಣುಗಳು ಈಗಲೂ ಇದ್ದಾರೆ. ಮದುವೆನೇ ಸರ್ವಸ್ವ ಅಲ್ಲಾ” ಭಾಷಣ ಮುಂದುವರಿಯುತ್ತಿತ್ತೇನೋ
ತಲೆ ತಗ್ಗಿಸಿ ಕುಳಿತ ನೀಲಾಳ ಕಣ್ಣಲ್ಲಿ ನೀರು. ಅದನ್ನು ಕಂಡವಳೇ ಗಾಬರಿಯಾಗಿ “ಅಮ್ಮ, ಅಳ್ತಾ ಇದ್ದಿಯಾ, ಯಾಕಮ್ಮ” ಆರ್ತಳಾಗಿ ಕೇಳಿದಳು.
“ಇನ್ನೇನು ನಂಗೆ ಉಳಿದಿದೆ ಅನು. ಬದುಕಿನುದ್ದಕ್ಕೂ ನೋವು, ಅಪಮಾನ, ನಿಂದನೆ ಸಹಿಸಿಕೊಂಡೇ ಬಂದೆ. ಈಗ ಮಗಳಿಂದಲಾದ್ರೂ ನೆಮ್ಮದಿ ಸಿಗುತ್ತೆ ಅಂದುಕೊಂಡಿದ್ದೆ. ಆದರೆ ನೀನೂ ನನ್ನ ಕೈ ಬಿಡ್ತಾ ಇದ್ದಿಯಾ” ಗದ್ಗದಿತಳಾದಳು.
ಮನಸ್ಸಿನಲ್ಲಿ ಏನೇ ಇದ್ದರೂ ತಾಯಿಯನ್ನು ನಿರಾಶೆಗೊಳಿಸಬಾರದೆಂದು “ಅಮ್ಮ ನೊಂದ್ಕೋಬೇಡ. ನಾನು ಮದ್ವೆ ಆಗಬೇಕು ತಾನೆ, ಸ್ವಲ್ಪ ಟೈಂ ಕೊಡು. ನನ್ನ ಮನಸ್ಸನ್ನು ಮದ್ವೆಗೆ ಸಿದ್ದಪಡಿಸೋಕೆ ಸ್ವಲ್ಪ ಕಷ್ಟ ಆಗುತ್ತೆ. ಆದ್ರೂ ನಿಂಗಾಗಿ ಆ ಕಷ್ಟನಾ ತಗೊಳ್ಳೋದಿಕ್ಕೆ, ಪ್ರಯತ್ನ ಪೂರ್ವಕವಾಗಿ ನನ್ನ ಬದಲಿಸಿಕೊಳ್ಳೋಕೆ ಟ್ರೈ ಮಾಡ್ತಿನಿ.”
“ನಿಜವಾಗ್ಲೂ ನಿನ್ನ ಮನಸ್ಸನ್ನು ಬದಲಾಯಿಸುತ್ತೀಯಾ ಅನು. ಈಗ ನೋಡು ನಂಗೆ ಎಷ್ಟೊಂದು ಸಂತೋಷವಾಗ್ತ ಇದೆ. ಥ್ಯಾಂಕ್ಯೂ ಅನು ಥ್ಯಾಂಕ್ಯೂ” ಮಗಳ ಕರಗಳನ್ನು ಅಮುಕಿದಳು.
“ಸಂತೋಷ ಆಯ್ತು. ಈಗ ತಿಂಡಿ ತಿನ್ನು” ಒತ್ತಾಯಿಸಿದಳು.
“ನಿನ್ನ ಮಾತೇ ನಂಗೆ ಹೊಟ್ಟೆ ತುಂಬಿಸಿಬಿಟ್ಟಿದೆ ಅನು. ಹಟ ನೋಡಿ ನಿಮ್ಮ ಅಪ್ಪನಿಗೆ ಹೇಗೆ ಉತ್ತರಿಸೋದು ಅಂತ ಭಯವಾಗಿತ್ತು ಕಣೆ. ನೆನ್ನೆನೇ ತಾಕೀತು ಮಾಡಿದ್ದರು. ಒಳ್ಳೆ ಸಂಬಂಧ. ಅವರು ಒಪ್ಪಿದ್ದಾರೆ ಅನಿಸುತ್ತೆ, ನಿನ್ನ ಮಗಳಿಗೆ ಬುದ್ಧಿ ಹೇಳಿ ಒಪ್ಪಿಸು ಅಂತಾ. ಅವರು ಮನುಪ್ಯರಲ್ಲವೇ. ಅವರಿಗೂ ಹೃದಯ ಅಂತಃಕರಣ ಇದ್ದೇ ಇರುತ್ತೆ. ಮೇಲೆ ಕೋಪ ತೋರಿಸಿದರೂ ಅಂತರಂಗದಲ್ಲಿ ನನ್ನ ಮಗಳು ಅನ್ನೋ ಸತ್ಯ ಅವರಿಗೆ ಚೆನ್ನಾಗಿ ತಿಳಿದಿದೆ. ಹಾಗಿಲ್ಲದಿದ್ದರೆ ನನ್ನ ಮಗಳು ಮದುವೆಗೆ ಯೋಗ್ಯವಾಗಿದ್ದಾಳೆ ನೋಡೋಕೆ ಬನ್ನಿ ಅಂತ ಕರೆಸ್ತಾ ಇದ್ರಾ ಅನು. ಮನಸ್ಸಲ್ಲಿ ಏನೇ ಇಟ್ಟುಕೊಳ್ಳಲಿ, ನನ್ನನ್ನು ಏನೇ ಅಂದು ಆಡಿ ಹಿಂಸಿಸಲಿ, ನಾಲ್ಕು ಜನರ ಎದುರು ನನ್ನ ಮಗಳು ಅಂತ ಒಪ್ಟಿಕೊಂಡಿದ್ದಾರಲ್ಲ, ಅದಷ್ಟೇ ಸಾಕು ಕಣೆ ಈ ಬದುಕಿಗೆ” ಎದೆ ತುಂಬಿ ನುಡಿದಳು.
“ನಾಲ್ಕು ಜನರ ಮುಂದೆ ಒಪ್ಟಿಕೊಳ್ಳದೇ ಏನು ಮಾಡ್ತಾರೆ. ಇದು ಅವರ ಮರ್ಯಾದೆ ಪ್ರಶ್ನೆ ಅಮ್ಮ. ತಾನು ಇಷ್ಟೊಂದು ಕೆಳಮಟ್ಟದಲ್ಲಿದ್ದೀನಿ ಅಂತ ಯಾವ ಮನುಷ್ಯ ನಾಲ್ಕು ಜನರೆದುರು ತೋರಿಸಿಕೊಳ್ಳೋಕೆ ಬರುತ್ತಾರೆ. ಈ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಂಡಿರೋ ನಿನ್ನ ಗಂಡನಿಗೆ ತನ್ನ ಮನೆಯಲ್ಲಿ ಇಂತಹ ಹುಳುಕು ಇದೆ ಅಂತ ಯಾವ ರೀತಿ ತೋರಿಸಿಕೊಳ್ಳುತ್ತಾರೆ. ಅದಕ್ಕೆ ನಾಟಕ. ನಾಟಕ ಆಡ್ತಾರೆ. ಹೃದಯದಿಂದ ಇರೋ ಭಾವನೆಗೆಳನ್ನು ಬೇರೆಯವರ ಹತ್ತಿರ ತೋರಿಸಿಕೊಳ್ಳುತ್ತಾರೆ. ಹೆಂಡತಿಗೆ, ಮಗಳಿಗೆ ಸಿಗಬೇಕಾದ ಪ್ರೀತಿ, ವಾತ್ಸಲ್ಯನ ವಂಚಿಸಿ ನಮ್ಮನ್ನು ನೋಯಿಸಿ, ಅವರ ಹೃದಯಕ್ಕೆ ಅವರೇ ಮೋಸ ಮಾಡ್ಕೋತಿದ್ದಾರೆ” ಆವೇಶ ಹೆಚ್ಚಾಗಿತ್ತು.
“ಇಲ್ಲ ಕಣೇ. ಅವರಿಗೆ ನಿನ್ನ ಮೇಲೆ ದ್ವೇಷ ಇಲ್ಲ. ನನ್ನ ನೋಯಿಸೋ ಭರದಲ್ಲಿ ನಿನ್ನನ್ನು ಅಲಕ್ಷ್ಯಮಾಡಿ ಬಿಟ್ಟಿದ್ದಾರೆ ಅಷ್ಟೆ” ಮೆಲ್ಲನೆ ಕಣ್ಣೀರು ಒರೆಸಿಕೊಂಡಳು.
ರಾತ್ರಿ ಹೆಂಡತಿ ಕೆಲಸ ಮುಗಿಸಿ ಒಳಬರುವುದನ್ನೇ ಶತಪಥ ತಿರುಗುತ್ತಾ ಕಾಯುತ್ತಿದ್ದ ಜಗದೀಶ, ನೀಲಾ ರೂಮಿನೊಳಗೆ ಕಾಲಿರಿಸಿದ ಕೂಡಲೇ
“ಏನಂದಳು ನಿನ್ನ ಮಗಳು” ಪ್ರಶ್ನಿಸಿದ.
“ಯಾವುದರ ಬಗ್ಗೆ”
“ಅದೇ ಮದ್ವೆ ವಿಷಯ. ಏನಾದರೂ ಕೊಂಕು ತೆಗೆದಳಾ. ನಾವು ನೋಡಿದ ಹುಡುಗನನ್ನು ಮಧ್ವೆ ಆಗ್ತಾಳೋ ಅಥವಾ ತಾಯಿಯಂತೆ ಮಗಳು ಅನ್ನೋ ಹಾಗೆ ಯಾವನಾನ್ನಾದರೂ ಪ್ರೇಮ ಮಾಡ್ತಿದ್ದಾಳಾ. ಮೊದಲೇ ದಾರ್ಢ್ಯದ ಹುಡುಗಿ. ನೀನೂ ಸಾಕಷ್ಟು ಕೊಬ್ಬಿಸಿದ್ದೀಯ. ಯಾವನ್ನಾದರೂ ಕರ್ಕೊಂಡು ಬಂದು ಇವನನ್ನೇ ಕಟ್ಕೋತೀನಿ ಅಂದರೆ ನನ್ನ ಪ್ರಸ್ಟೀಜ್ ಪ್ರಶ್ನೆ. ಅದಕ್ಕೆಲ್ಲ ನಾನು ಅವಕಾಶ ಕೊಡಲ್ಲ. ಹಾಗೇನಾದ್ರು ಮಾಡಿದ್ರೆ ಮನೆ ಬಿಟ್ಟು ಓಡಿಸ್ತೀನಿ. ನನ್ನ ಆಸ್ತೀ, ಒಂದು ಪೈಸನೂ ಕೊಡಲ್ಲ.”
“ಯಾಕೆ ಇಲ್ಲದ್ದೆಲ್ಲ ಕಲ್ಪನೆ ಮಾಡ್ಕೊಂಡು ಇಲ್ಲದ ಸಮಸ್ಯೆ ತಂದುಕೊಳ್ತೀರಾ. ಅವಳೇನೂ ನಿಮ್ಮ ಆಸ್ತಿಗೆ ಕಾದು ಕುಳಿತಿಲ್ಲ. ಅವಳಿಗೆ ಮದ್ವೆ ಅಂದ್ರೆನೇ ಅಲರ್ಜಿ. ನನ್ನ ಕಣ್ಣೀರಿಗೆ ಕರಗಿ ಸ್ವಲ್ಪ ದಿನ ಟೈಂ ಕೊಡು ಅಂದಿದ್ದಾಳೆ. ಅವಳು ಯೋಚನೆ ಮಾಡಿ ತಿಳಿಸಲಿ. ಅವಳ ಭವಿಷ್ಯದ ಪ್ರಶ್ನೆ. ನಿಧಾನವಾಗಿ ನಿರ್ಧಾರ ತಗೊಳ್ಳಲಿ. ದುಡುಕುವುದು ಬೇಡ. ಯಾರನ್ನಾದರೂ ಮೆಚ್ಚಿ ಮದ್ವೆ ಆಗ್ತಿನಿ ಅಂದ್ರೆ ಇನ್ನೂ ಸಂತೋಷನೇ. ನನ್ನ ಬದುಕಿನಂತೆ ಅವಳ ಬದುಕಾಗುವುದು ಬೇಡ. ಮೆಚ್ಚಿದವನೊಡನೆ ಮದ್ವೆ ಆಗಿ ಸುಖವಾಗಿರಲಿ”. ಕಡ್ಡಿ ತುಂಡಾಗುವಂತೆ ಉತ್ತರಿಸಿದಳು.
“ಏನೇ ಹಾಗಂದರೆ, ನೀನೇ ಅವಳಿಗೆ ಸಪೋರ್ಟ್ ಮಾಡ್ತಿಯಾ. ಯಾವನೋ ಜೊತೆ ಓಡ್ಹೋಗು ಅಂತ ಹೇಳಿಕೊಡ್ತಿಯಾ. ನೀನು ಒಬ್ಳು ತಾಯಿನಾ. ನಿಂಗೇನೇ ಕಡ್ಮೆ ಅಗಿರೋದು ನನ್ನ ಕಟ್ಕೊಂಡು. ನೀನು ಎಂತಹವಳು ಅಂತ ಗೊತ್ತಿದ್ದು ನಿಮ್ಮಪ್ಪನಿಗೋಸ್ಕರ ನಿಂಗೆ ತಾಳಿಕಟ್ಟಿ ಬಾಳು ಕೊಟ್ಟಿದ್ದೀನಿ. ನಿನ್ನ ಆಸ್ತಿಯ ಹತ್ತರಷ್ಟು ಸಂಪಾದಿಸಿದ್ದೇನೆ. ಯಾರಿಗೋಸ್ಕರ ಇದೆಲ್ಲ ನಿನಗೋಸ್ಕರ, ನಿನ್ನ ಮಗಳಿಗೋಸ್ಕರ ಕಣೆ” ಕೂಗಾಡಿದ. ಮಲಗಿದ್ದ ಅನು ಅಪ್ಪನ ಕೂಗಾಟ ಕೇಳುತ್ತಲೇ ನಿದ್ರಿಸಲು ಪ್ರಯತ್ನಿಸಿದಳು.
*****