ಹೂವರಳಿ ನಿಂತು ಕಾಯಾಗಲೆಂದು
ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ
ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ
ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ
ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ
ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ್ಯ ಕಾಲ
ಕಾಯಲು ಹೆದರಿ ಕೆಲವು ಉದುರಿಯೇ ಹೋಗುತ್ತವೆ
ಹಣ್ತನ ಅವಕ್ಕೊಂದು ಕಲ್ಪನೆಯ ಕಗ್ಗ
ಕೆಲವು ಎಲೆಮರೆಯೊಳಗೇ ತುಂಬಿಗಳಿಂದ
ಮಬ್ಬು ತುಂಬಿಸಿಕೊಳ್ಳುತ್ತವೆ
ಕಾಯಿ-ಹಣ್ಣಾಗುವ ಬದಲು ಕಾತದ್ದು ಕೀತ ಹುಣ್ಣಾಗುತ್ತದೆ
ಹಾಡಾ ಹಗಲೆ ಕಾವಳ ಮುಚ್ಚಿಕೊಳ್ಳುತ್ತದೆ
ಕೆಂಪು ದೀಪದ ಕೆಳಗೆ ಹದ್ದು ನಾಯಿಗಳಿಗೆ ತಿಪ್ಪೆಭೋಜನವಾಗುತ್ತವೆ.
ಕೆಲವು ಕವಿದ ನೆರಳನ್ನು ಕಳಚಿಕೊಂಡು
ಹೊಸ ಮುಖದ ವೇಷ ತಳೆಯುತ್ತವೆ
ಮತ್ತೆ ಕಾದಿದ್ದ ಹೂಗಳ ಸಾಲು ಸೇರಿ ಹಲ್ಲು ಬಿರಿಯುತ್ತವೆ.
ಜೋಲುವ ಪಕಳೆಗಳ ಸಾವರಿಸಿಕೊಳ್ಳುತ್ತಾ
ಹಿಗ್ಗಿರುವುವು ಕುಗ್ಗಿ, ಕುಗ್ಗಿಯೂ ಹಿಗ್ಗಿದಂತೆ ಮಾಡಿ
ಅಂತೂ ಹಿಗ್ಗಾಮುಗ್ಗಾ ತಿಕ್ಯಾಡಿ
ಮೇಣ ಪಡಿಯಚ್ಚಿನಲ್ಲಿ ಕರಗಿ ಹಣ್ಣುಕಾಯಾಗಲು
ಹವಣಿಸುತ್ತವೆ
ಕಾಯಿಯ ಮುದ್ರೆಯೊತ್ತಿಸಿಕೊಂಡು
ತಾಯಾಗಲು ತಾಯತ ಕಟ್ಟಿಸಿಕೊಂಡು
ಎಲ್ಲರೆದುರು ಲಿಂಗಪೂಜೆಗಣಿಯಾದಾಗ
ಜನ್ಮಸಾರ್ಥಕತೆಯ ಹೂಮಳೆ
ಬಾಷ್ಪದೊಡನೆ ಬೆರೆತು ಹೋಗುತ್ತದೆ.
*****