ಅನಿಸಿಕೆಯ ಬೀಜ ಮರವಾಗಿ ಅಭಿವ್ಯಕ್ತಿ ಪಡೆಯುವುದನ್ನು
ಎಲ್ಲ ಗೋಲಿಗಳೂ ಸಟಸಟ ತಂತಮ್ಮ ಗುಳಿಗಳಲ್ಲಿ
ಸಲೀಸಾಗಿ ಬೀಳುವುದನ್ನು
ಎಲ್ಲ ಬಾಗಿಲುಗಳು ನನ್ನ ಟಕಟಕಾಟಕ್ಕೆ ಕೂಡಲೇ
ತೊರೆದುಕೊಂಡು ನನ್ನ ಸ್ವೀಕರಿಸುವುದನ್ನು
ಎಲ್ಲ ಕಲ್ಪತರುವಿನ ತಲೆಕಾಯಿಗಳಿಗೆ ಬಡಕೊಂಡಿರುವ
ಸಣ್ಣ ಹುಳುಕೊರೆವ ರೋಗ ವಾಸಿಯಾಗುವುದನ್ನು
ಎಲ್ಲಾ ಮೂಳೆ ಮುನುಗು ಹೊರಮಿನುಗಿ ಮೌನದ ಬಸಿರಿಂದ
ದನಿಯಾಗಿ ಘನೀಭವಿಸಿ ಘಂಟಾಘೋಷಗಳಾಗುವುದನ್ನು
ದಾರಿಯಿಲ್ಲದ ಬಯಲಾರಣ್ಯದಲ್ಲಿ ದಿಕ್ಕುತಪ್ಪಿದ ಮರಿವಕ್ಕಿಗಳು
ತಂತಮ್ಮ ತಾಯಗೂಡುಗಳ ಸೇರುವುದನ್ನು
ದಿನೇ ದಿನೇ ಬೆಳೆಯುತ್ತಿರುವ ಕುರುಕೋಟಿಯ
ಧೃತರಾಷ್ಟ್ರ ಸಂತಾನ ಬೀಜವು ಸುಟ್ಟುಹೋಗುವುದನ್ನು
ಹದ್ದು ಮೀರುವ ಮಂಗಬಾಲಗಳ ಕತ್ತರಿಸುವುದನ್ನು
ಜಿದ್ದುಗೇಡಿ ಕಲ್ಲೆದ್ದು ಕೂಗಿ ಕುಣಿವುದನ್ನು;
ನಿದ್ದೆ ಇಲ್ಲದೆ ಕಣ್ಬಿಡುವ ರಾತ್ರಿಗಳಲ್ಲಿ
ರತಿಗೀತೆಯು ಸೆಲೆಯೊಡೆದು ಉಕ್ಕುವುದನ್ನು
ತುಂಬಿದ ಕೊಡ ತುಳುಕುವುದನು ತೆರವೆಲ್ಲ ತುಂಬುವುದನ್ನು
ಕಾಣಲು ಕಾಯುತ್ತಿದ್ದೇನೆ.
*****