ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ
ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ

ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ
ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ

ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ದಿನವಿರಲೀ
ಬಿಗುಮಾನ ಬಿಟ್ಟೀಗ ಕೈ ಚಾಚಿ ಕರೆಯುವೆ ಸಗ್ಗದೈಸಿರಿ ಬರಲೀ

ಒಂಟೀಽ ಒಂಟೀಽ ನನ್ನಲ್ಲೆ ಅಂಟೀಽ ಸನ್ನೇಸಿ ನಾನಲ್ಲ
ನಿನ್ನನ್ನ್ ಮುಟ್ಟಿದರೆ ಉರಿಯುವೆ ನಾನೆಂಬ ಮಡಿವಂತನೇನಲ್ಲ

ಹಾರುವ ಹಕ್ಕಿಯು ಹೊರಗಡೆ ಬರುತಿದೆ ಹಾರಲು ಪಥವಿಲ್ಲ
ಜೋಡಿಗೆ ನೀನೂ ಬಂದರೆ ಮುಗಿಲಿಗೆ ಹಾರಲು ಚಿಂತೆಯಿಲ್ಲ

ಹುಡುಕಿದೆ ಹುಡುಕಿದೆ ಅರಣ್ಯವೆಲ್ಲವ ನಿನ್ನಯ ಸುಳಿವಿಲ್ಲ
ಅಡಗಿದಿ ಎಲ್ಲೀ ಹುಡುಕಲಿನ್ನೆಲ್ಲಿಽ ಕರೆದರು ಬರಲಿಲ್ಲ

ಯುಗ ಯುಗ ಹುಡುಕೀನಿ ಹಗಲಿರುಳು ಹುಡಕೀನಿ ಎದ್ದಾಗ ನಿದ್ಯಾಗ
ಪ್ರಕೃತಿ ಪುರುಷರಂತೆ ಜೀವ ಭಾವರಂತೆ ವಿದ್ಯಾಗ ಬುಧ್ಯಾಗ

ಶಿಲ್ಪಾವ ಕಟದೀನಿ ನಿನ್ನೆಷ್ಟೊ ರೂಪಾವ ಬಣ್ಣೀಸಿ ಬರದೀನಿ
ಕವನದ ಹೂಮಾಲೆ ದಣಿಯದೆ ಕಟ್ಟೀನಿ ಮುಡಿಸಲು ಕರದೀನಿ

ನಾಮರ ನೀ ಬೇರು ನಾ ಹೂವು ನೀಕಂಪು ನಾಕೆಂಡ ನೀನೆಣ್ಣೆ
ನಾ ಭೂಮಿ ನೀ ಬಾನು ನಾ ಹಳ್ಳ ನೀ ನೀರು ನಾ ಬೆಳೆ ನೀ ಮಳೆ

ಹೀಗಿದೆ ಕಗ್ಗಂಟು ನನ್ನ ನಿನ್ನಯ ನಂಟು ಬಿಡಿಸಲು ಬಂದೀತೆ
ಹಸಿದಾಗ ಅನ್ನವ ಬಯಸುವ ಹಸಿವನು ತಡೆಯಲು ಬಂದೀತೆ

ಯೋಗದಾ ಮಾಧುರ್ಯ ವಿಯೋಗದಲ್ಲಿಯು ಹುಚ್ಚನ ಮಾಡುವುದು
ಸಂಯೋಗ ಸೌಭಾಗ್ಯ ಸೃಷ್ಟಿಯ ಒಳಹೊರಗೆ ಬೆಸೆದಂತೆ ಕಾಣುವುದು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)