ಪ್ರಿಯ ಸಖಿ,
ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತದಲ್ಲವೇ? ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ.

ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು. ಮೃದುವಾಯಿತೆಂಬ ಖುಷಿ.  ಪುಟ್ಟ ಮಕ್ಕಳಿಗೆ ಮನೆ ಮುಂದೆ ನಿಂತ ನೀರಲ್ಲಿ ಕಾಗದದ ದೋಣಿ ಬಿಡುವ ಸಂಭ್ರಮ. ಸುರಿವ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದು ಮಲಗುವ, ಬಿಸಿ ಬಿಸಿ ಪಕೋಡ, ಬೋಂಡ ತಿನ್ನುವ ಉಮೇದು ಹಲವರಿಗೆ. ಕಾದು ಬೆಂಡಾಗಿದ್ದ ಧರಿತ್ರಿ ತಂಪಾದಳಲ್ಲಾ ಧಗೆ ಅಡಗಿತಲ್ಲಾ ಎಂಬ ಸಮಾಧಾನ. ಮೊದಲ ಮಳೆಯ ಮಣ್ಣಿನ ವಾಸನೆ ಅನುಭುವಿಸುವ ರಸಿಕತೆ ಕೆಲವರಿಗೆ, ಸುರಿವ ಮಳೆಯಿಂದ ಸಿಕ್ಕ ಅನಿರೀಕ್ಷಿತ ಬಿಡುವಿನಿಂವ ಬಹಳ ದಿನಗಳಿಂದ ಉಳಿದುಬಿಟ್ಟಿದ್ದ ಕೆಲಸಗಳನ್ನು ಪೂರೈಸುವ ಉತ್ಸಾಹ ಮತ್ತೆ ಕೆಲವರಿಗೆ ……

ಮತ್ತೆ ಅದೆಷ್ಟು ಜನರಿಗೆ ಅದಿನ್ನಿನ್ಯಾವ ಬಗೆಯ ಸಂತಸವೋ ಎಣಿಸಲಾಗದಂತಹುದು, ಗುಣಿಸಲಾಗದಂತಹುದು, ಹೇಳಲಾಗದಂತಹುದು!

ಎಡಬಿಡದೇ ಮೂರು ದಿನದಿಂದ ಸುರಿಯುತ್ತಿರುವ ಬಿರುಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ. ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ. ಮತ್ತೆರಡು ದಿನದಿಂದಾ ಉಪವಾಸ. ಜೊತೆಗೆ ಮನೆಯಿಡೀ ಸೋರಿ ಕೆರೆಯಂತಾಗಿದೆ. ಮೂಲೆಯಲ್ಲೋ ಇವನ ಹೆಂಡತಿ, ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ‘ಅಪ್ಪ ಹಸಿವು’ ಎಂದು ಮಗುವೊಂದು ನುಡಿದುಬಿಟ್ಟರೆ ಇವನೇನು ಮಾಡಬೇಕು? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ.

ಸಖಿ, ಇವನೊಬ್ಬ ಫುಟ್ಪಾತ್ ವ್ಯಾಪಾರಿ, ಬೀದಿಯಲ್ಲಿ ತನ್ನ ಸಣ್ಣಪುಟ್ಟ ಸಾಮಾನುಗಳನ್ನು ಹರವಿ ದಿನವಿಡೀ ಕುಳಿತಿದ್ದು, ಮಾರಾಟವಾದ ಹಣದಿಂದ ಇವನ ಸಂಸಾರದ ದಿನದಿನದ ಹೊಟ್ಟೆ ತುಂಬಬೇಕು. ಒಂದು ದಿನ ವ್ಯಾಪಾರ ನಿಂತರೂ ಇವನ ಸಂಸಾರಕ್ಕೆ ಉಪವಾಸವೇ ಗತಿ. ಮಳೆಗಾಲದಲ್ಲಂತೂ ಉಪವಾಸ ಅನಿವಾರ್ಯ. ಕೆಲವೊಮ್ಮೆ ಒಂದು ದಿನ ಎರಡು ದಿನ ಮತ್ತೆ ಹಲಬಾರಿ ಐದಾರು ದಿನ. ದೀರ್ಘ ದಿನಗಳವರೆಗೆ ಮಳೆ ಬಿಡದೆ ಹುಯ್ಯುವ ಇಂತಹ ದಿನಗಳಲ್ಲಿ ಯೋಚಿಸುತ್ತಾನೆ. ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬುವುದು? ಭಿಕ್ಷೆ ಬೇಡಿ…. ಕಳ್ಳತನ ಮಾಡಿ ಅಥವಾ……..

ಇಲ್ಲ! ಇವೆಲ್ಲಾ ತಾನು ಮಾಡಲಾರೆ. ತನಗೆ ಗೊತ್ತಿರುವುದು ವ್ಯಾಪಾರವೊಂದೇ! ಧೋ ಎಂದು ಸುರಿವ ಮಳೆಗೆ ಮನಃಪೂರ್ತಿ ಬೈಯ್ದು ಹಗುರಾಗಬೇಕೆಂದು ಕತ್ತನ್ನು ಆಕಾಶದೆಡೆಗೆ ಎತ್ತಿದ್ದಾನೆ. ಅವನಿಗೇ ಅರಿವಿಲ್ಲದೇ ಅವನ ಕಣ್ಣಿಂದ ಧಾರಾಕಾರ ನೀರು ಹರಿಯತೊಡಗಿದೆ. ‘ಎಷ್ಟೆಲ್ಲಾ ಜನರಿಗೆ ಸಂತಸ ನೀಡುವ ಮಳೆಯೇ ನನ್ನ ನನ್ನಂತಹ ಕೆಲವೇ ಕೆಲವರಿಗೆ ತೊಂದರೆಯಾದಾದರೂ ಸರಿಯೇ ನೀ ಸುರಿಯಲೇಬೇಕು. ಬೆಂದ ಮನೆ ಮನಗಳ ತಂಪಾಗಿಸಲೇಬೇಕು’ ಎಂದು ಎದೆ ತುಂಬಿ ಪ್ರಾರ್ಥಿಸುತ್ತಾನೆ. ಈಗ ಮಳೆ ನಿಂತಿದೆ. ಮತ್ತೆ ಅವನ ವ್ಯಾಪಾರ ಭರದಿಂದ ಪ್ರಾರಂಭವಾಗಿದೆ!
*****