ವರ್ಗ: ಕವನ
ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
ಪುಸ್ತಕ:
ಕೀಲಿಕರಣ: ಕಿಶೋರ್ ಚಂದ್ರ
ವ್ಯಾಕರಣ ದೋಷ ತಿದ್ದುಪಡಿ:
ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ
ಕನ್ನಯ್ಯಾ, ಓ ಕನ್ನಯ್ಯಾ,
ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ
ಕನ್ನಯ್ಯಾ, ನನ್ನ ಕನ್ನಯ್ಯಾ
ಕನಕಾಂಬರೀ ಬಣ್ಣದ ಸೀರೆಯನ್ನುಡುವೆ,
ಬಣ್ಣ ಬಣ್ಣದ ಗಿಡವ ಪಾತಿಯಲಿ ನೆಡುವೆ,
ಸೇವೆಯಾನಂದವೇ ಕೂಲಿ ನನಗೆನುವೆ,
ಹೂ ಬೆಳೆಸಿದುದೆ ಭಾರಿ ಜಹಗೀರಿ ಎನುವೆ.
ನವಿಲುಗರಿಯ ಕಿರೀಟ, ಪೀತಾಂಬರ,
ಮುಗಿಲ ನೀಲಿಯ ಎದೆಗೆ ಮಿಂಚಿನ ಸರ;
ಭಾವಬಂಗಾರ ಓ ಕೃಷ್ಣಲಾಲ,
ಹೇಗೆ ಅರಿಯಲೊ ನಿನ್ನ ಪ್ರೇಮಜಾಲ.
ಸಾಧುಜನ ದಿನವು ಬೃಂದಾವನಕ್ಕೆ
ಸಾಗುವರು ಕೃಷ್ಣನನು ಕಾಣಲಿಕ್ಕೆ;
ಮೀರಳಾ ಹೃದಯವೇ ಬೃಂದಾವನ,
ಸಿಗುವನೋ ಗಿರಿಧರ ಬಯಸಿದ ಕ್ಷಣ.
*****