ಪ್ರಣತಾರ್ತಿಪಂಕದಿಂ ಕಪ್ಪಿಡಿದ ಪಾದದವ
ವಿಧಿಯಿಚ್ಛೆ ಸ್ತಬ್ಧಗೊಳೆ ಮುಗ್ಧ ಕಾಮಾಂಗದವ
ಎದೆ ಹಿಗ್ಗೆ ಮೈತಂದಿತೆನೆ ಪುಷ್ಟಧವಲಾಂಗ
ಎಣೆಯಿರದ ಗೆರೆಗೊರಲ ಹಣೆಗುರುಳ ನೊಸಲವನು
ದರಹಾಸವನು ಸೂಸಿ ದಯೆಯ ಮಕರಂದವನು
ಹನಿಸುತ್ತ ಚುಂಬನೌತ್ಸುಕ್ಯವನು ಕಾಂಬರೊಳು
ಕೊನರಿಸುವ ಶಿಶುರಮ್ಯ ಸ್ನಿಗ್ಧಮಧುರಾಧರನು
ಹೊರಮುಟ್ಟುಗಳನ್ನೆಲ್ಲ ಕಳೆದ ಸರಿ ಅರೆಮುಗಿದು
ಒಳಗುಗುವ ಚಿತ್ಸುಖವ ಪ್ರತ್ಯಕ್ಷಗೊಳಿಸುವೊಲು
ಕಣ್ಣನರೆತೆರೆದು ಮಿದುನಗೆಯೊಡನೆ ಕೆಳೆಗೊಳಿಸಿ
ತನ್ನ ಸುಖವನ್ಯರಿಗು ದೊರೆವೊಲನುಕಂಪಿಸುತ
ಇಳೆಮುಗಿಲ ಸೋಪಾನಮಾರ್ಗದೊಲು ನಿಂತನಿವ-
ಎನಲಿಹನು ದಿವ್ಯನಾತ್ಮಧ್ವಜಂ ಗೊಮ್ಮಟ ಜಿನಂ
ಪದತಲದಿ ಕ್ಷಣಕ್ಷಣಕು ಹಿಂಗುತಿದೆ ಪುರಜೀವನಂ.
*****

















