
ಬಂದಿತು ದೀಪಾವಳಿ ಮನೆಮನೆಯೊಳು
ಕುಡಿಯಾಡಿಸುತಿದೆ ನರುಬೆಳಕು
ಮಿರುಸೊಡರಿನ ಮಿತಮಾನದೊಳಿರುಳನು
ಮೊಗೆದು ಸುರಿವ ಮೋದದ ತಳಕು.
ಕತ್ತಲೊಡನೆ ಪಂತವಿಲ್ಲವಿವಕೆ
ತಮದೊಡನಜ್ಜಿಯಾಟವಾಡುವಂಥ ಬಯಕೆ
ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು
ಈ ನೋಟವೆನ್ನ ಮನದ ಜಡಕೆ ಮದ್ದು.
ಧಗ ಧಗ ನುರಿದುರವಣಿಸುತ ಬಂದಾ
ಹರಿಚಕ್ರವನಸುವಿಂ ಶಮಿಸಿ
ಆ ಬೆಂಕಿಯ ಲಯರೂಕ್ಷತೆಗೀ ತೆರ
ಸುಂದರ ಸೌಮ್ಯತೆಯಳವಡಿಸಿ
ಭವಗರದಾಗರ ತಾನೆನೆ ಬಾಳುತ
ಕೊನೆಗೀ ಹಬ್ಬದ ಸೊದೆಯಿತ್ತ
ನರಕನ ನೆನವುದು ಮನ ನಲಿದೀ ದಿನ
ಬೆಳಕಿನ ತೆನೆಗಳ ಬೆಳೆಸುತ್ತ.
ಮದಿಸಿದ ಬಲಿಯನು ತುಳಿದವನವನಾಳಾದವನವನು
ಅಣುಹೃದಯದಿ ಪವಡಿಸುತೀ ಸೃಷ್ಟಿಯ ಕನಸಾಂತವನು
ತಾನೆಚ್ಚರೆ ಜಗವೆಲ್ಲವ ಬರಿತೇಜದಿ ತುಂಬವನು
ಆ ಎಡೆವಿಲಯಾಗ್ನಿಗು ಈ ಎಡೆ ಹಣತೆಗು ಇಂಬವನು.
ಈ ತೆರನಾದಾ ವಿಶ್ವ ವಿಚಿತ್ರನ ನೆನೆವೆ
ಆ ತೇಜದ ಕಾರುಣ್ಯದ ರೂಪದ ಈ ದೀಪಾವಳಿಯೊಳು ನಲಿವೆ
ವಿಜ್ಞಾನದ ಮದವಾಂತಾಸುರವದೊಳು ವಿಲಯಾಗ್ನಿಯ
ಮೆರೆಸುವ ಲೋಕವ ಮರೆವೆ
ಇರುಳೊಡನೀತೆರ ಬಹುವರ್ಣದ ಲಾಲಿತ್ಯದೊಳಾಡುವ
ಬೆಳಕಿಗೆ ಜಯವೆರೆವೆ.
*****
















