ಹಕ್ಕಿ ಹಾರತಾವ ಹಾರಿ ಅಡತಾವ ಚಿಕ್ಕ ಮಕ್ಕಳ್ಹಾ೦ಗ
ಅಕ್ಕ ನೋಡು ಭೋರಂಗಿ ಭೃ೦ಗಿ ಮದರಂಗಿ ಗಿಡದ ಮ್ಯಾಗ
ಮಾವು ಹೂತು ಮು೦ಜಾವ ಮರಸತಾನ ನಸಕು ಬಣ್ಣ ಅದಕ
ಬೇವು ಜಾರಿ ಬರಿ ಗಂಧ ಬೀರತಾವ ಸುತ್ತು ಮುತ್ತು ಬನಕ
ಕಾಡ ಮಲ್ಲಿಗಿ ಜಾಡ ಹಿಡಿದು ಬೆಳೆದಾವ ಕೊಳ್ಳದಾಗ
ಜೋಡಿ ಜೋಡಿಲೆ ಹಾಡ ಹೇಳತಾವ ಹಕ್ಕಿ ಮ್ಯಾಳದಾಗ
ಬೆಳ್ಳಿ ನೀರು ಬೆಳದಿಂಗಳಂತೆ ಬಂದಿಳಿದು ಮುಗಿಲಿನಿಂದ
ಹಳ್ಳಕೊಳ್ಳ ಹೊರಸೂಸಿ ತಬ್ಬತಾವ ತೆವರ ಉಬ್ಬಿನಿಂದ
ಅತ್ತ ಕೇದಿಗೆ ಹತ್ತಿ ಹಾದಿ ಕೈಯತ್ತಿ ಕೋರತವ ಬರವ
ಎತ್ತ ಹೋದರೂ ಮತ್ತ ನೋಡಿದರು ಚ೦ದ ಇಲ್ಲಿಯ ಇರವ
ಯಾರ ತೋಟವಿದು? ಯಾರ ಆಟ ಮತ್ತಾರ ಮಾಟವಿದುವೆ
ತೋರಿ ಸುತ್ತ ಐಸಿರಿಯ ಮರೆಯಲಿಹ ದೊರೆಯ ಕಾಣಲಳವೆ
*****

















