
[೧೯೨೧ ರಲ್ಲಿ ಮಹಾತ್ಮಾ ಗಾಂಧಿಯವರ ಸತ್ಯ ಅಹಿಂಸೆಗಳ ಹೊಸ ಹಾದಿಗೆ ಮನಮೆಚ್ಚಿ ಪರೋಪಕಾರವೇ ಪುಣ್ಯವೆಂಬುದನ್ನು ನೆಚ್ಚಿ ಗೀತಾಪತಿಯಾದ ಕೃಷ್ಣನನ್ನು ಮೆಚ್ಚಿಸಲು ಇದೇ ದಾರಿಯೆಂಬ ಮಾತನ್ನು ಅಚ್ಚುಮೆಚ್ಚಿನಿಂದ ಭಕ್ತಿಯಿಂದ ಒಡಮೂಡಿಸಲಾಗಿದೆ.]
೧
ತಾನು ಬಲ ಜಗವು ಬಲವೆಂದು ತಿರುಳ
ತಿಳಿಯದಲೆ ಕೆಲಜನರು ಗಳಹುತಿಹರು!
ಜ್ಞಾನಿಯದ ಬಲವೆಂದು ತಿಳಿವನೇ ಕಣ್ಮುಂದೆ
ಮರಮರನೆ ಮರಗುತಿರೆ ಜಗದ ಜನರು ?
೨
ಅನ್ಯರೆಲ್ಲರ ನನ್ನಿಸುತ ಹೃದಯದೊಳು ತನ್ನ
ಪರಹಿತದೊಳೊಪ್ಪಿಸುವದರೊಳಿರುವದು!
ನನ್ನಿಯಂತಃಕರಣದೊಳು ತೀರ ತಿಳಿಯಾಗಿ
ಪೊಕ್ಕು ಪರಮಾತ್ಮನಂ ಪೂಜಿಸುವದು!
೩
ಎನಿತು ಸೊಬಗಿನದು! ಸೌಭಾಗ್ಯವೈ! ಹಿಗ್ಗೆ ಸೈ
ಜನತೆಗೋಸುಗ ಸಾಯ್ವುದು!
ಅನಿತಲ್ಲವಿನಿತಲ್ಲವಿದು ಸತ್ತ್ವ! ದೇವನಪ್ಪುದು!
ಕೃಷ್ಣ ಪರತತ್ತ್ವವು!
೪
ಇದೆ ಸತ್ಯವಿದೆ ಜ್ಞಾನವಿದರೊಳಗೆ ಶಾಂತಿಯಿದೆ
ದೊಡ್ಡವರ ದಾರಿ ಜೀಯಾ!
ಮುದದಿ ನೀ ಹಾಕಿಕೊಟ್ಟಿಹ ಬಟ್ಟೆ ನಿನ್ನನ್ನು
ಮುಟ್ಟಲ್ಕೆ ಕೃಷ್ಣರಾಯಾ!
*****
















