ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು
ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ
ಡಾಲರ್ ಹೊಳೆ ಸಮಯ ಪ್ರಜ್ಞೆಗೆ
ಟಾಮ್ ಹ್ಯಾರಿಗಳ ನಡುವೆ ಎರಡನೆಯ
ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ
ಹಣಕ್ಕೆ ಸಮಾಧಾನ ಪಡುವ ಗತಿ.

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಸಾಧಕ ಸಂಶೋಧಕರಿಗೆ ತವರು ಸಂಶಯವಿಲ್ಲ
ಏನೆಲ್ಲ ಸೌಕರ್ಯ ಆಂತರಿಕ ನೆಮ್ಮದಿ
ಜಾತಿಮತಗಳ ಪ್ರಭಾವ ಪರಿಚಯಗಳ
ಗೋಜಿಲ್ಲದೆ ಸಾಮರ್ಥ್ಯ ಬುದ್ಧಿಜೀವಿ
ವ್ಯಕ್ತಿಗೆ ಸ್ವಾಗತವೋ ಸ್ವಾಗತ
ಸ್ವಾಭಿಮಾನ ಸ್ವಾವಲಂಬನೆಗಳ ಮಂತ್ರದ
ದಂಡ ಹಿಡಿದೇ ಮುನ್ನುಗ್ಗುವ ಗುರಿ

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಭೋಗಜೀವನ ಮೊಜು ಮಜದ ಹುಚ್ಚುಹೊಳೆ
ಹರೆಯಕ್ಕಿಂತ ಮೊದಲೇ ಹೆರುವ
ಸ್ವಚ್ಛಂದ ಜೀವನಾನುಭವ
ಗಳಿಸುವುದಕ್ಕೆ ಮೊದಲೇ ವಿಚ್ಛೇದನ
ಬೇಕೆಂದಾಗ ಬರಬಾರದು ಮಕ್ಕಳ ಮನೆಗೆ
ಕರಳು ಕರಕಲಾಗುತ್ತಿರುವ ವೃದ್ಧಾಶ್ರಮಿಗಳಿಗೆ
ಹೂಗುಚ್ಛಗಳ ರವಾನೆ, ಮತ್ತೆ ಕೆಲಸವೋ
ಮಾನಿನಿಯ ತೆಕ್ಕೆಯೋ ಅಥವಾ ಸಮಾಜ ರೀತಿಯೊ.


ಅಹುದಹುದು ಮತ್ತೆಲ್ಲಿಯೂ ಕಾಣಲಾರೆವು
ಅಮೆರಿಕ ಪ್ರಜಾಪ್ರಭುತ್ವವು ನೀಡಿರುವ
ಸಮಾನತೆ ಜನತಾ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ
ಎಲ್ಲವೂ ತನಗೇ ಇರಲೆನ್ನುವ ಸ್ವಾರ್ಥ
ನೆಪ‌ಒಡ್ಡಿ ಹದ್ದಿನಂತೆ ಎರಗುವ ಹುನ್ನಾರ
ಹಿಂದುಳಿದ ನಾಡುಗಳ ಮೇಲೆ
ಜಾಗತಿಕ ವಲಯದಲಿ ದಿಗ್ಭ್ರಮೆ
ಅದರ ಒಳನೀತಿಗೆ
ಯುದ್ಧ ಹಿಂಸೆ ದಬ್ಬಾಳಿಕೆ ಒತ್ತಡಗಳು ಪಟ್ಟಿ ಮೀರಿದ್ದು
ಸಾವು ನೋವುಗಳ ಆಕ್ರಂದನ ಕಣ್ಣೀರು
ಮಕ್ಕಳು ಮರಿಗಳ ರೋಧನ
ಎದೆ ಸೀಳುವುದಿಲ್ಲಿ.

ಹಿರೋಷಿಮಾ ನಾಗಾಸಾಕಿಯರ ಸುಟ್ಟದೇಹ
ತುಂಡು ತುಂಡಾದ ಇರಾಕ್ ಕ್ಯೂಬಾ ಪ್ಯಾಲಸ್ಟೈನ್
ವಿಯೆಟ್ನಾಂ ಮಾರ್ಷಾಲ್ಸ್ ದ್ವೀಪಗಳ ತಲ್ಲಣ
ಯಾಕಿಷ್ಟೊಂದು ಸಾಮ್ರಾಜ್ಯಾಶಾಹಿ ಧೋರಣೆ
ಯಾಕಿಷ್ಟೊಂದು ದಬ್ಬಾಳಿಕೆ
ಮಾತು ಕೇಳದವರಿಗೆ ಏನೇನೋ ನೆಪಗಳೊಡ್ಡಿ
ಒತ್ತಡಕೆ ಸಿಲುಕಿಸುವ ನೀತಿ
ಬಿನ್‌ಲ್ಯಾಡನ್ ಬೆನ್ನುಹತ್ತಿ
ಅಪಘಾನಿಸ್ತಾನ ಗುಡ್ಡಬೆಟ್ಟಗಳೆಲ್ಲ ಸುಡುಗಾಡಾದದ್ದು
ಒಬ್ಬ ಸದ್ದಾಂಗಾಗಿ
ಇರಾಕ್ ಹೊತ್ತಿ ಉರಿದದ್ದು
ಇನ್ನೂ ಇನ್ನೂ ಸಾವಿರ ಬಾಣಗಳು
ಬತ್ತಳಿಕೆಯಲಿ ಕಾಯುತಿವೆ
ಅಣುಬಾಂಬ್, ಯುರೇನಿಯಂ ಶಸ್ತ್ರಾಸ್ತ್ರಗಳ
ಹಪಹಪಿಕೆ ಕಿರುಬೆರಳಿನಲಿ


ಒಂದೆಡೆ ತಾನು ತನ್ನದೆನ್ನುವ ಮದ
ಮತ್ತೊಂದೆಡೆ ಕೇಳದವರ ಹೊಸಕಿಹಾಕುವ ಮತ್ಸರ
ಒಮ್ಮೆ ಅಮೆರಿಕ ಎಂದರೆ….
*****

ಪುಸ್ತಕ: ಇರುವಿಕೆ