ಬಿಜೆಪಿದೀಗ ತಬ್ಬಲಿಯು ನೀನಾದೆ ಮಗನೆ ಪೋಜು

ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರಿಂದ, ಬಿಜೆಪಿ ಸ್ಥಿತಿ ಈಗ ತಬ್ಬಲಿಯೂ ನೀನಾದೆ ಮಗನೆ ಅಂಬಗಾಗೇತ್ರಿ. ಅಪ್ಪ ಮಕ್ಕಳ ಇರುದ್ದವಾಗಿ ಯಡೂರಿ ಅವಾಜ್ ಎತ್ತಿದ್ದೇ ಕಮ್ಮಿ. ಇಲ್ಲ ಅಂದ್ರೂ ನೆಡಿತದೆ. ಖೇಣಿ ಕಾರಿಡಾರ್ ಯೋಜನೆನಾಗೆ ರೈತರಿಗೆ ಜಮೀನು ಕೊಡಿಸಲು ಗೆಜ್ಜೆ ಕಟ್ಕಂಡು ಕುಣಿದ ಯಡೂರಿ, ಕುಣಿ ಕುಣಿದು ಸುಸ್ತಾಗಿ ಮೌನವಾಗಿದ್ದೇ ಹೆಚ್ಚು. ‘ನಮ್ಮೋರಿಗೆ ಮಂತ್ರಿಗಿರಿ ಕೊಡ್ರಪಾ, ನಿಗಮ ಮಂಡಳಿ ಅಧ್ಯಕ್ಷರನ್ನಾದ್ರೂ ಮಾಡ್ರಿ ಅಂತ ಪಟ್ಟಿ ರೆಡಿ ಮಾಡ್ಕೊಂಡು ತಿರುಗಿದ್ರೆ ಹೊತು ಗಟ್ಟಿಯಾಗಿ ಮಾತಾಡಿದ್ದಿಲ್ಲ.

ಬಳ್ಳಾರಿ ರೆಡ್ಡಿ ಸಿಡಿ ಇನ್ಸಿಡೆಂಟ್ನಾಗೆ ಕಡ್ಡಿ ಆಡಿಸಿದ ಯಡ್ಡಿ, ಉಬ್ಬಲ್ಲು ಅನಂತಿ ಮ್ಯಾಗೆ ಗೂಬೆ ಕೂರಿಸಲು ಹೋಗಿ ತಾನೆ ಗೂಬೆ ಆಗಿದ್ದಾತು. ತನ್ನ ಸಖಿ ಶೋಭಾ ಕರಂದಾಂಧ್ಲೆನ ಮಂತ್ರಿ ಮಾಡದಂತ ಎಷ್ಟೇ ಲಗಾಟಿ ಹೊಡೆದ್ರು ಯಡ್ಡಿ ಆಸೆಯೂ ಈಡೇರಲಿಲ್ಲ. ಬೇಕಂದೋನ ಟ್ರಾನ್ಸ್‍ಫರ್ ಮಾಡುವ ತಾಕತ್ತೂ ಇಲ್ಲ. ಅಷ್ಟೆಲ್ಲಾ ಯಾಕ್ರಿ, ಜೆಡಿ‌ಎಸ್ ಮೆಂಬಸ್ ಗೆ ತನ್ನ ಮುಖಾರವಿಂದವನ್ನು ಹಾಫ್ ಅನ್ ಹವನಾಗೆ ತೋರೋ ಕುಮ್ಮಿ, ಈ ಎಬಡೇಸಿ ಯಡ್ಡಿನಾ ಬಾಗಿಲಬಳಿ ಬರೋಬ್ಬರಿ ತ್ರೀ ಹವಸ್ ಕಾಯಲು ಹಚ್ಚಿದ್ನ ಗಮನಿಸಿದರೆ ಸಾಕು, ಬಿಜೆಪಿಯ ಲೆವಲ್ ಯಾವ ಮಟ್ಟಕ್ಕೆ ಕುಸಿದೇತೆ ಅಂಬೋದು ಎಳೆ ಮಕ್ಕಳಿಗೂ ಅರ್ಥವಾಗಿ ಹೋತದೆ ಬಿಡ್ರಿ. ಅರ್ಥವಾಗ್ದೆ ಇರೋದು ಗೋಡ್ರು ಕೊಡಿಸಿದ ಲಾಲಿಪಪ್ ಚೀಪ್ತಾ ದಿನ ದೂಡ್ತಿರೋ ಯಡ್ಡಿಗೆ ಮಾತ್ರ.

ಮೊನ್ನೆ ರಾಜ್ಯೋತ್ಸವದಾಗೆ ಪ್ರಶಸ್ತಿಗುಳ್ನ ಹಂಚೋವಾಗ್ಲೂ ಯಡ್ಡಿ ಕೊಟ್ಟ ಪಟ್ಟಿ ಸೇರಿತಯ್ಯಾ ಕಸದ ಬುಟ್ಟಿ. ಆರ್‌ಎಸ್ಸೆಸ್ನ ಕೆಲವು ಚಡ್ಡಿ ವೀರರಿಗೆ ಪ್ರಶಸ್ತಿ ಕೊಡಿಸಲು ಡಿಸಿ‌ಎಂ ಯಡ್ಡಿ ಕಣ್ಣೀರಿಡಬೇಕಾತು. ಇದೇ ಬಿಜೆಪಿನೇ ಅನಾಮತ್ತಾಗಿ ಗೋಡ್ರ ಪದತಲದಾಗೆ ಅಡ ಇಟ್ಟ ಯಡ್ಡಿ ಈಗ ತನ್ನವರ ಪಾಲಿಗೇ ನುಂಗಲಾರದ ತುತ್ತು. ಜೆಡಿ‌ಎಸ್ ಚಾರಂ ಬೆಳೆಸ್ಕೋತಾ ಅದೆ. ಕಾಂಗೈ ವಾರಂ ಅಪ್ ಆಗ್ತಾ ಅದೆ. ಬಿಜೆಪಿ ಗರಮ್ಮೂ ಆಗ್ದೆ ನರಂ ನಾಯಿಕುನ್ನಿ ಆಗೇತಿ. ಬಿಜೆಪಿ ತಬ್ಬಲಿ ಸ್ಥಿತಿ ಕಂಡ ಅನಂತಿ ಗ್ಯಾಂಗ್‍ಗೀಗ ಗಾಣ್ ಗಾಬರಿ. ‘ನಮ್ದೆ ಸಪ್ರೇಟ್ ಕ್ಯಾಂಡಿಡೇಟ್ ಯಲಕ್ಷನ್ನಿಗೆ ಹಾಕಲಿಕ್ಕುಂಟು ಮಾರಾಯ್ರ. ನಾವೇನಿದ್ದರೂ ಕೊಮಾಸಾಮಿ ಫ್ರೆಂಡ್ಸ್. ಗೋಡ್ರು ಯಾರಂಬೋದೇ ಅರಿಯವು’ ಎಂದು ಪಟಪಟ ಮಾತಾಡ್ತಾ, ಸದಾ ಹಲ್ಲುಗಿಸಿಯುವ ಸದಾ ಆನಂದ ಗೋಡ ಅಂಡ್ ಯಡ್ಡಿ ರಾಗ ಕೂಡ ಬದಲಾಗಿದೆ. ಸಮನ್ವಯ ಸಮಿತೀಲಿ ಆಡೋ ಆಟದಾಗೆ ಆಲ್ವೇಸ್ ‘ಡ್ರಾ’ ಮಾಡಿಕೊಳ್ಳುವ ಯಡ್ಡಿಯ ಮಡ್ಡಿತನಕ್ಕೆ ಸ್ಯಾಸಕರೂ ಶ್ಯಾನೆ ಅಪ್‍ಸೆಟ್ ಆಗವರೆ. ಆದರೇ ಚೇರ್ ಹಿಡಿದಿರೋ, ಚೋರ ಶಿಖಾಮಣಿಗಳೆಲ್ಲಾ ಸಮ್ಮಿಶ್ರವೋ, ಮಿಶ್ರವೋ, ಮಿಕ್ಸಚರೋ ಉಳೀಲಿ ಎಂಬಾಸೆ. ದಿನಗಳೆದಂತೆ ಸಿ‌ಎಂ ಸೀಟಿಗೆ ನಿಯರೆಸ್ಟ್ ಆಗುತ್ತಿದ್ದೇನೆಂಬ ಯಡೂರಿ, ಗೋಡ್ರು ಮತ್ತವರ ಮಕ್ಕಳು ಹೇಳಿದ್ಕೆಲ್ಲಾ ಗೋಣು ಆಡಿಸೊ ರೀತಿ ನೋಡಿದ ಬಿಜೆಪಿ ಸ್ಯಾಸಕರು, ಇಂಥ ದರಬೇಸಿ ಸರ್ಕಾರನಾ ಸಮಾಧಾನ ಮಾಡಿ ಯಲಕ್ಷನ್ನಿಗೆ ನಿಲ್ಲೋದೇ ಗಂಡಸುತನ ಕಣ್ರಿ. ಗುಲಾಮಗಿರಿ ಸಾಕು ಅನ್ಲಿಕತ್ತಾರೆ. ಸರ್ಕಾರ ಉಳಿಯಲೇಬೇಕೆಂಬಾಸೆಗೆ ಕುಮ್ಮಿ ಹಿಂದೆ ಯಡ್ಡಿ ಹಿಂದೆ ಚೇರ್ ಹಿಡಿದಿರೋ ಚೆಡ್ಡಿಗಳೆಲ್ಲಾ ಕ್ಯೂ ನಿಂತಾವೆ.

ಕಾರಿಡಾರ್ ಯೋಜ್ನೆ ಟೇಮಲ್ಲಾಗ್ಲಿ, ಬಳ್ಳಾರಿ ರೆಡ್ಡಿ ಸಿಡಿ ಇನ್ಸಿಡೆಂಟೇನಾರಾಗ್ಲಿ, ಸಿ‌ಎಂ ಮಗನ ಮಿಡ್‍ನೈಟ್ ಮಸಾಲಾ ಹಾವಳಿನಲ್ಲಾಗ್ಲಿ ೧೫೦ ಕೋಟಿ ನುಂಗಿದ ಪ್ರಕರಣದಲ್ಲಾಗ್ಲಿ ಯಡೂರಿ ಎಂದಿನಂತೆ ಅರಚಾಡದೆ ಕುಮ್ಮಿ ಕೊಟ್ಟ ಐಸ್ ಕ್ರೀಮ್ ಚೀಪ್ತಾ ತೆಪ್ಪಗಿರೋದನ್ನು ನೋಡ್ತಿರೋ ಅನಂತಿ ಗ್ಯಾಂಗ್, ಅಂಡಿಗೆ ಬೆಣೆ ಸಿಕ್ಕೊಂಡೋರ ಹಂಗೆ ಆಡ್ಲಿಕತ್ತಾರೆ. ಜೇನು ಕಿತ್ತು ಸಖತ್ತಾಗಿ ತಿಂತಿರೋ ಜೆಡಿ‌ಎಸ್ಸು, ಬಿಜೆಪಿ ನೋಗೆ ಕೈ ನೆಕ್ಕಿಸ್ತಿರೋದ್ನ ಗಮನಿಸ್ತಿರೋ ಉಬ್ಬಲ್ಲು ಅನಂತಿ ಹೊಟ್ಟೆನಾಗ ಅಲ್ಸರ್ ಗೆಡ್ಡೆ ಬಿಟ್ಟದೆ! ಗೋಡ್ರು ಬ್ಯಾರೆ ಚಾಮುಂಡೇಸ್ವರಿ ಯಲಕ್ಷನ್ ಆಗುತ್ಲು ಖಡ್ಗ ಹಿಡಿತೀವಿ ಅಂತ ಎಚ್ಚಮ ನಾಯಕನ ತರಾ ಅಬ್ಬರಿಸ್ತಾ ಅವರೆ. ಇವರು ಖಡ್ಗ ಎತ್ತೋದು ಯಾರ ಮೇಲೆ? ‘ಕೈ’ ಮೇಲಾ ‘ಕಮಲ’ದ ಮೇಲಾ ಅಂಬೋ ಗುಮಾನಿ ಅನಂತ್ಗೆ.

ತನ್ನನ್ನು ಸ್ಟೇಟ್ ಅಂಡ್ ಸೆಂಟ್ರಲ್ ಲೆವಲ್ ನಾಗೆ ಮುಗಿಸುವ ಸ್ಕೆಚ್ ಹಾಕವ್ನೆ ಯಡ್ಡಿ ಅಂತ ತಿಳೀತ್ಲು ಅನಂತಿ ಢಡಕ್ಕನ್ನೆದ್ದು, ಸಂಸದ ಯತ್ನಾಳ್, ಕೆ.ಬಿ. ಶ್ಯಾಮ್ಯ, ಜಿಗಜಿಣಗಿ ಇತ್ಯಾದಿ ಸೆಂಟ್ರಲ್ ಮೆರಟ್‍ನೋನ, ಲಿಂಬಾವಳಿ ಗ್ಯಾಂಗ್ನ ಪ್ರಭಾವಳಿನೂ ಪಡೆದು ಯಡ್ಡಿ ಇರುದ್ಧ ವಾರ್ ಡಿಕ್ಲೇಗೆ ತನ್ನ ಪಡೆ ರೆಡಿ ಮಾಡಲಿಕತ್ತಾನೆ. ‘ಕೇಳಿ ನನ್ನ ಮುದ್ದಿನ ಸ್ಯಾಸಕರೆ, ನೀವು ಸಚಿವರಾದ್ರೂ ಗೋಡ ಅವನ ಮಕ್ಕಳ ಸೇವಕರು. ಹಾಕಿದೋಟು ತಿಂದು ಮಲಗೋ ಆಲ್ಸೇಶಿಯನ್ಸ್ ಆಗಿರಿ’ ಅಂತ ಅತೃಪ್ತ ಆತ್ಮಗಳ ಅಂಡೂ ಚಿವುಟಿ ತೊಟ್ಟಿಲು ತೂಗ್ತಾ ಅವ್ನೆ.

ಫಾರ್ ಎಂಕ್ಸಾಂಪಲ್ ಅನನುಭವಿ ಶಂಕ್ರಮೂರ್ತಿಯ ಪವರ್ ಎಲ್ಲಾ ಶಿಕ್ಷಣ ನಿರ್ದೇಶನಾಲಯದ ಜಯಂತಿ, ಪ್ರಧಾನ ಕಾರ್ಯದರ್ಶಿ ಕೌಶಿಕ ಅಂಡಿಗೆ ಹಾಕ್ಕಂಡು ಕುಂತಾರೆ. ವೈದ್ಯಕೀಯ ಶಿಕ್ಷಣದ ಆಚಾರ್ಯನಿಗೆ ಇಲಾಖೆ ಹೆಡ್ಡು ಎಲ್ಲಿದೆ? ಟೆಲ್ ಎಲ್ಲಿದೆ ತಿಳಿಯದಿರೋದ್ರಿಂದ ಇಲಾಖೆ ಚೀಫ್ ವಿದ್ಯಾಶಂಕನೆ ನಿಜವಾದ ಸಚಿವನಂತಾಗವ್ನೆ. ಸಕ್ಕರೆ ಸಚಿವ ರವೀಂದ್ರನಾಥ್ ಗೆ ಮಂಜುನಾಥನೆಂಬ ಆಯುಕ್ತ ಗಬ್ಬು ನಾತ ಕುಡಿಸ್ತಾ ಅವ್ನೆ. ಆರೋಗ್ಯ ಸಚಿವ ಅಸೋಕನ ಪಾಲಿಗೆ ಕಾರ್ಯದರ್ಶಿ ಉಷಾಗಣೇಶನ್ಗೇ ಚಿಕನ್‍ಗುನ್ಯಾ. ಶೆಟ್ಟರ್ ಎಂಬ ದಡ್ಡನಿಗೆ ಜಮಾದಾರನೆಂಬ ಸ್ಯನಿ ಬೆನ್ನು ಹತ್ತೇತಿ. ರಾಮಚಂದ್ರೇಗೋಡ ನೋ ನೀರಜ ರಾಜ್ಕುಮಾರಳ ಕಾಟ ತಡಿಲಾದೆ ರಾಮಧ್ಯಾನಕ್ಕೆ ಕುಂತಾನೆ. ಇದ್ದುದ್ರಾಗೆ ರಾವಳಾಸುರ ನಂಗೇ ಕಾಣೋ ಈಶ್ವರಿನೇ ಬೆಟರ್. ಉಳಿದೋರೆಲ್ಲಾ ನಾಮ್ ಕಾವಸ್ತೆ ಮಂತ್ರಿಗಳಾಗಿದ್ದಾರೆ.

ಕೈ ಕೆಳಗಿನ ಅಧಿಕಾರಿಗಳೆಲ್ಲಾ ಸಿ‌ಎಂ ಇಶಾರೆನಾಗೆ ನೆಡಿತಾ ಮಂತ್ರಿಗುಳ್ನ “ಕ್ಯಾರೆ, ಕೈಸೆರೆ?” ಅಂತ ಸೌಜನ್ಯಕ್ಕೂ ಬಿಲ್ ಖುಲ್ ಇಚಾರಿಸ್ಕಂತಿಲ್ರಿ. ಇಂಥ ಬಿಕನಾಸಿ ಸರ್ಕಾರ ಬದುಕಿದ್ರೇಟು ಸತ್ತರೇಟು? ಹಿಂಗೇ ಮುಂದುವರೆದರೆ ಮುಂದಿನ ಸಿ‌ಎಂ ಸೆಂಟ್ ಪರ್ಸೆಂಟ್ ರೇವಣ್ದನೇ ಹೊರ್ತು ಯಡೂರಿ ಅಲ್ಲವೇ ಅಲ್ಲ. ಬಿಜೆಪಿಗಂತು ತಬ್ಬಲಿ ಗತಿ ತಪ್ಪಿದ್ಲಲ್ಲ ಅಂತ ಡಿಸೈಡ್ ಮಾಡಿರೋ ಅನಂತಿ. ಈಟುದಿನ ತಲೆ ಮರೆಸಿಕೊಂಡಿದ್ದೋನು ಈಗ ತೊಡೆ ತಟ್ತಾ, ಸದಾ ಆನಂದ ಗೋಡನ ಅಧ್ಯಕ್ಷ ಪದವಿನಾ ಲಪಟಾಯಿಸೋಕೆ ಡೀಲು ಕುದುರಿತ್ತಾ ಮುಹೂರ್ತ ಇಡ್ಲಿಕ್ಕೆ ರೆಡಿ ಆಗ್ಲಿಕತ್ತಾನೆ. ಬೆಂಗಳೂರು-ಟು-ಮಂಗ್ಳೂಗೆ ಮಾತ್ರ ಗಾಡಿ ಓಡಿಸುವ ಡಿ‌ಎಸ್‌ಎಸ್ ಗೋಡ ಕುಮ್ಮಿಗೆ ಸಲಾಮ್ ಹೊಡಿತಾ, ಯಡ್ಡಿಗೆ ಹಾಂಡ್ಲು ಹೊಡಿತಾ ಬರಿ ಸ್ಕ್ಯಾಂಡಲ್ ಮಾಡ್ಕೊಂಡು ಕಾಲ ಕಳಿತಾ ಇರೋ ಈ ಹಲ್ಲು ಗಿಸಬನ್ನ ಮೊದ್ಲು ಅಧ್ಯಕ್ಷನಾಗಿ ಪಕ್ಷನಾ ಡೆವಲಪ್ ಅಂಡ್ ಡೀಸೆಂಟ್ ಮಾಡ್ತೀನಿ ಅಂತ ಪಣ ತೊಟ್ಟಾನೆ ಉಬ್ಬಲ್ಲು ಅನಂತಿ.

‘ಈ ಅನಂತಿ ಅಂಬೋನು ಜಿನ್ನಾ ದೋಸ್ತಿ ಅಡ್ವಾಣಿಯ ಕೈ ಗೊಂಬೆ. ಇವನ್ನ ನಂಬ್ಯಾಡಿ’ ಅಂತ ಯಡ್ಡಿ ಹೆಡ್ ಆಫೀನ್ ಆರೆಸ್ಸೆಸ್ ನೋತಾವ ಫೀಟ್ಟಿಂಗ್ ಇಟ್ಟವ್ನೆ. ಈ ಮುಸುಕಿನ ಗುದ್ದಾಟದಾಗೆ ಚಾಮುಂಡೇಸ್ವರಿನಾಗೆ ಬ್ಯಾರೆ ಯಲಕ್ಷನ್ನು. ಸಪ್ರೇಟ್ ಕ್ಯಾಂಡಿಡೇಟ್ ಹಾಕ್ತೀನಂತ ಕುಣೀತಿಪ್ಪ ಯಡ್ಡಿ ಇಲ್ಲೂ ಮ್ಯಾಚ್ ‘ಡ್ರಾ’ ಮಾಡ್ಕೊಂಡು ಒಮ್ಮತದಿಂದ  ಕ್ಯಾಂಡಿಡೇಟ್ನೆ ಒಪ್ಕೊಂಡ ಮ್ಯಾಗೆ ಒಳಗೆ ಅನಂತಿಗೆ ಮೈ ಊರಿ. ಇನ್ನು ಮುಂದಾರ ಯಡ್ಡಿಗೆ ಮೂಗುದಾರ ಏರಿಸಲು ಒಳಗೇ ತಯಾರಿ. ಇದೀಟು ಒಳಗಿನ ಯುದ್ಧ. ಹೊರಗಿನ ಯುದ್ಧ ಇರೋದು ಚಾಮುಂಡೇಸ್ವರಿನಾಗೆ. ಗೆದ್ದರೆ ಸರ್ಕಾರ ಹಾರಿಸ್ತೇತೆ ಗಾಳಿಪಟ. ಸೋತರೆ ಸರ್ಕಾರವೇ ಧೂಳಿಪಟ – ಏನಾತದೋ ಚಾಮುಂಡೇಸ್ವರಿನೇ ಬಲ್ಲಳು ಕಣ್ರಿ!
*****
( ದಿ ೩೦-೧೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯಾಪಾರ
Next post ರೀತಿ ನೀತಿ (ಅಮೆರಿಕ)

ಸಣ್ಣ ಕತೆ

 • ಮೇಷ್ಟ್ರು ವೆಂಕಟಸುಬ್ಬಯ್ಯ

  ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…