ಯಾರೋ ಬಂದರು ಹಾರಿ
ಧಗೆಯ ಕುದುರೆಯನೇರಿ
ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ
ಬೂದಿಯಾದವು ಮೆಲ್ಲಗೆ

ಬೆಂಕಿಯಂಗಾಲಿಂದ
ತುಳಿದು ಕೆಂಡವ ಸುರಿದ
ಉರಿದು ಹೋದವು ಹೂವು ಚಿಗುರು
ಉಕ್ಕಿ ಹೋದವು ಹಾಲು
ಹೌಹಾರಿ ಹಾಯೆನಲು
ಬಿರಿದಾವು ಎದೆಯ ನೋವು – ಆಸೆಯೆ ಉರಿಗೆ
ತೆರೆದಾವು ಎದೆಯ ನೋವು

ನಿಂತ ನೀರಿನ ತು೦ಬ
ನೂರು ತಾರೆಯ ಬಿಂಬ
ನಡುಗಿ ನಿಡುಸುಯ್ದವು ಒಳಗೆ
ದೂರದ ಕಾಡಿನಲಿ
ಯಾಯಾರು ಸುಳಿಯದಲಿ
ಕಾದು ನಿಂತವು ಹೂಜೀವ – ಹಾ ಮಹದೇವ
ಬೂದಿಯಾದವು ಹೂಜೀವ
*****

ಪುಸ್ತಕ: ನಿನಗಾಗೇ ಈ ಹಾಡುಗಳು