
೧
ಶೇಷಶಯನ ಶ್ರೀ ಕೃಷ್ಣನೆ,
ಸೂಸುವ ಸಂತೋಷದಿಂದ ಬಾರೈ ಬಳಿಗೆ!
ದೋಷಗಳು ದಹಿಸಿ ಹೋಗಿವೆ,
ಪೋಷಿಸು ಮನ್ನಿಸುತ ಗೆಳೆಯ! ಗೆಳೆಯರ ಗೆಳೆಯಾ!
೨
ತಾತಾ ತ್ರಿಗುಣಾತೀತಾ!
ಕೈ ತಾ! ಕೈ ತಾರೊ ನಿನ್ನ ಮಲ್ಲಿಗೆ- ಕೈ ತಾ!!
ಪ್ರೀತಿಯ ಕೈಯಂ ತಾ ಸಂ-
ಪ್ರೀತಿಯ ಬೆರಳುಳ್ಳ ಕೈಗಳಂ ತಾ! ತಾತಾ!!
೩
ಮಿಡುಗುವೆ ತಾತಾ ತೊಡೆಯನು
ಕೊಡು ಕೊಡು ಶ್ರೀಕೃಷ್ಣ ನಿನ್ನ ತೊಡೆಗಳ
ಮೇಲೆ ಕಡು ಸೊಗಸಿನಿಂದ ತಲೆಯ-
ನ್ನಿಡುತ ಗಡದ್ದಾಗಿ ಮಲಗಿ ನಿದ್ದೆಯ ಮಾಳ್ಪೆ !
೪
ಬೆರಳಂ ಚೀಪುತ ಚೀಪು-
ತ್ತರಳಿದ ನಗೆಮೊಗದ ಸೊಬಗ ನೋಡುತ ನೋಡು-
ತ್ತೆರಕದ ತೊಡೆಯೊಳು ಮಲಗುವೆ!
ಕರವನು ಮೇಲಿಟ್ಟು ಚುಕ್ಕುಚುಕ್ಕೂ ಬಡೆಯೈ!!
*****

















