ಕಾದಿಹಳು ಭೂದೇವಿ,
ನೀವು ಬಾರಿರಾ!
ದಿವ್ಯ ತೀರ್ಥ ತಾರಿರಾ!
ಬಿಸುಸುಯಿಲ ಬೇಗೆ ಹೊಮ್ಮಿ
ಆಗಸವ ತಟ್ಟಿ ತಿವಿಯೆ
ಹರಣವನೆ ಕೊರಳಲಿರಿಸಿ
ಕರುಣೆಯನು ಕೇಳುತಿಹಳು
ಕ್ಷಣ ಕ್ಷಣವು ನಿಮ್ಮ ನೆನಸು
ಆನುದಿನವು ನಿಮ್ಮ ಕನಸು
ಮರದುದಿಗೆ ಕಣ್ಣನಿರಿಸಿ
ನೋಡುವಳು ಕ್ಷಿತಿಜ ದೆಡೆಗೆ
ನಭವೇರಿ ಕೂಡಿ ಬನ್ನಿ
ನಲವೇರಿ ಕುಣಿದು ಬನ್ನಿ
ಒಡಲೊಲವ ಕರೆದು ತನ್ನಿ
ಮೊಲೆಹಾಲ ಹರಿಸಿ ಬನ್ನಿ
ಹನಿ ಹನಿಯಲೊಲವು ಬಲವು
ಚೆಲುವಿನಿದು ಇಳಿದು ಬರಲಿ
ಕಣ್ಮಿಂಚ ಕಳೆಯ ಬೆಳೆಯು
ಕುಡಿಯೊಡೆದು ಅರಳಿ ಬರಲಿ
ಹಸಿ ಹಸಿರ ಬೆಳೆಸಿ ನಲಿಸಿ
ಎಳ ನಲುಮೆಗೆಂಪನಿರಿಸಿ
ಎದೆ ಮುಗುಳನರಳಿಸುವುದು
ಹೂ ಗಂಪ ಹರಿಯಿಸುವುದು.
ಸೊದೆಗರೆಯೆ ಉಂಡು ತಣಿದು
ಹೊಸ ಬಾಳ ಪಡೆದು ಬೆಳೆದು
ಹೂಹರುಷ ಹರಡಿ ಕುಣಿದು
ಉನ್ಮದಿಸಿ ನಲಿಯಲೆಂದು
ಅತುರದಿ ಕಾಯುತಿಹಳು!
ಕಾದಿಹಳು ಭೂದೇವಿ
ನೀವು ಬಾರಿರಾ
ದಿವ್ಯ ತೀರ್ಥ ತಾರಿರಾ!
*****



















