Home / ಕವನ / ನೀಳ್ಗವಿತೆ / ಭೀಷ್ಮ ಉತ್ತರಾಯಣ

ಭೀಷ್ಮ ಉತ್ತರಾಯಣ

ಆಕಾಶದಲ್ಲಿ ಧ್ವನಿ-ದೂರದಿಂದ

ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ
ವಿತೃಷ್ಣನಾದೆನು ನಾ ಬಾಯಾರೆ
ದ್ವಾರಕೆ ಬಾಗಿಲ ತೆರೆಯದೊ ಬಾರೆ
ಉತ್ತರೆಯಿಂದುತ್ತರವನು ತಾರೆ.

ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ
ಶರಪಂಜರದಲಿಯೊರಗರಲಾರೆ
ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ಮುರಾರೇ.

ಮೇಳದವರು
೧ನೆಯ ಮೇಳ :-
ಯಾವ ಉತ್ತರಕಾಗಿ ಕಾದಿಹರೇನೊ ತಿಳಿಯದು ಭೀಷ್ಮರು
ಏಕೊ, ತಿಳಿಯದು ಭೀಷ್ಮರು.

೨ನೆಯ ಮೇಳ:-
ಭರತ ವಂಶದ ಕುರುಹುಗಾಣದೆ ಎಂತು ಅಳಿವರು ಭೀಷ್ಮರು
ಎಂತು ಉಳಿವರು ಭೀಷ್ಮರು.

೧ನೆಯ ಮೇಳೆ:-

ಕರಿಯ ಮೋಡವು ಎಂದೊ ಕರಗಿತು
ಬಿಳಿಯದೋ ಮೈದೋರಿದೆ
ತಂಪು ಆರಿದೆ ಚಳಿಯು ಏರಿದೆ
ಬಿಸಿ ಬಿಸಿಯ ಸುಳಿ ಬಾರದು.
ಯಾವ ಉತ್ತರಕ್ಕಾಗಿ….

ಎಲ್ಲೊ ಚಿಗುರೆಲೆ ತಲೆಯ ಚಾಚಿದೆ
ಹಣ್ಣೆಲೆಯು ಬಾಯ್ಬಿಡುತಿದೆ
ಯಾವ ಉತ್ತರಕಾಗಿ….

ರವಿಯ ಕಿರಣವು ಒಲಿದು ಬಡಗಣ
ಮೊದಲ ಹೆಜ್ಜೆಯನಿಡುತಿದೆ.
ಯಾವ ಉತ್ತರಕಾಗಿ….

೨ನೆಯ ಮೇಳ:-
ಎಂದೋ ನಂದಿತು ಕೌರವಾಗ್ನಿಯು
ಪಾಂಡವರ ಸೊಡರುರಿವುದು
ಅಂದು ಅಶ್ವತ್ಥಾಮ ಬೀಸಿದ
ಅಸ್ತ್ರ ಇನ್ನೂ ಇರಿವುದು.

ದ್ವಾಪರಕೆ ಎತ್ತಾಯ್ತು ಮಂಗಳ
ನಾಂದಿ ಬೇಡದೆ ಕಲಿಯುಗ
ಸೋದರಾಗ್ನಿಯು ಶಾಂತವಾಗಿದೆ
ದೀಪ ಬಯಸಿದೆ ಹೊಸ ಜಗ.

೧ನೆಯ ಮೇಳ :-
ಕೃಷ್ಣ ದ್ವೈಪಾಯನರು ಬಂದರು
ಭಾರವಾಗಿದೆ ಭಾರತ.
ಭೀಷ್ಮ ತಪವೋ ಗ್ರೀಷ್ಮ ತಾಪವೊ
ಫಲಿಸುವುದು ಎನೆ ಹಾರುತ.
ಯಾವ ಉತ್ತರಕಾಗಿ….

೨ನೆಯ ಮೇಳ:-
ಹಿಂದೆ ಬಂದನು ಧರ್ಮರಾಜನು
ಪಿತಾಮಹನಿಗೆ ಬಾಗುತ
ಕುಂತಿ ಬಂದಳು ಕುಲದ ದೈವಕೆ
ಜನ್ಮವೇ ಋಣಿಯಾಗುತ.
ಭರತವಂಶದ….

ಭೀಷ್ಮ:-
ಕಾಲಕಾಗಿಯೆ ಕಾದೆನೇ ನಾ | ನಿನ್ನ ಉತ್ತರಕಾದೆನು
ನಿನ್ನ ಸ್ಮರಣದಿ ಮರಣ ಮರೆತೆನು | ನಿನ್ನವನೆ ನಾನಾದೆನು ||ಪಲ್ಲ||
ಗೋಪಾಲಕಾ, ಚಿರಬಾಲಕಾ | ಕುಣಿ |
ಕುಣಿಯೊ ಕಣ್ಮಣಿ ತೂಗುತಾ
ಕ್ಷಣಿಕ ಭವದೊಳು ನೀನೆ ಸಂತತಿ
ಸೂತ್ರಧಾರನು ಆಗುತಾ
ಸಂಹಾರಕಾ, ಉಧಾರಕಾ | ಹುಸಿ
ಹುಸಿಯೊ ಶ್ರೇಷ್ಠ ಸ್ವಾರ್ಥವೂ
ನಿನ್ನನುಗ್ರಹದಿಂದಲೇ ಪರ-
ಮಾರ್ಥವೂ ಪುರುಷಾರ್ಥವು.

ಮೇಳ:-
ತೀರಿತೋ ಹದಿನೆಂಟೆ ದಿನದಲಿ
ಕೌರವರ ಭೈರವ ರಣಾ
ಬಾಳಗೊಡದಿದೆ ಸಾಯಗೊಡದಿದೆ
ಭೀಷ್ಮರಿಗು ಆ ಪಿತೃ ಋಣಾ.

ವ್ಯಾಸ:-
ನಾನು ಹೆಣಗಿದೆ, ಒಣಗಿದೆ
ಧರ್ಮ ಕರ್ಮಕೆ ಗೊಣಗಿದೆ
ಕುರುಡನೋ ಧೃತರಾಷ್ಟ್ರನಾದನು
ಬರಡು ಆದನು ಪಂಡುವು
ಎರಡು ಮೀರಿದ ವಿದುರ ವಿಧುರನು
ಕೊರಡು ಆದನು ಕುಲದಲಿ.

ಧರ್ಮ:-
ನಾನು ಹೆಣಗಿದೆ, ಒಣಗಿದೆ
ಧರ್ಮ ಕರ್ಮಕೆ ಗೊಣಗಿದೆ
ಓ ಪಿತಾಮಹ, ನಿಮ್ಮನೆದುರಿಸ-
-ಲಾರೆ ಎಲ್ಲಿದೆ ಧೈರ್ಯವು
ಯುಧಿಷ್ಠಿರನೆಂದಂದು ಕರೆದರು
ಎಂದೊ ಹೋಗಿದೆ ಸ್ಥೈರ್ಯವು.

ಕುಂತಿ:-
ನಾನು ಹೆಣಗಿದೆ, ಒಣಗಿದೆ
ಧರ್ಮ ಕರ್ಮಕೆ ಗೊಣಗಿದೆ
ಸತ್ಯವತಿ ಸತಿ ಎತ್ತಿ ಹಿಡಿದಾ
ಕುಡಿಗೆ ಎರಗಿದೆ ಕತ್ತಿಯು
ಬತ್ತಲೋ ನಾನೊಣಗಲೋ ಎನು-
-ತಿತ್ತು ಹಾರುವ ನೆತ್ತಿಯು
ತಾಯಿ ಜೀವದ ಆಸೆ ಸಲಿಸಲು
ಮಾಯಿಯಾದೆನು ಮರುಗಿದೆ
ಬಾಯಿಯಿದ್ದೂ ಮೌನಿಯಾದೆನು
ಕಾಯೊ ಎನುತಿಹೆ ಕೃಷ್ಣಗೆ.

೧ನೆಯ ಮೇಳ:
ಬಂದನೊ ದ್ವಾರಾವತಿ ಯದುನಂದನ
ತಂದನೊ ಒಸಗೆಯ ಸುಮುಖದಲಿ
ಉತ್ತರೆ ಗರ್ಭಕೆ ಅಭಯವ ಸಾರುತ
ಹತ್ತಿರ ಬಂದನು ಭೀಷ್ಮನಲಿ.

೨ನೆಯ ಮೇಳ:-
ಭೀಷ್ಮ ಪ್ರತಿಜ್ಞೆಯ ಪ್ರಶ್ನೆಗೆ ಉತ್ತರ
ಮಂಗಲ ತಂದಿದೆ ಕೃಷ್ಣಮುಖ
ಉತ್ತರ ಕ್ಷೇಮವೆ ಉತ್ತರಾಯಣವು
ಬೇರೆ ಮುಹೂರ್ತವು ಯಾವ ಸುಖ?

ಕೃಷ್ಣ:-
ಓ ಬ್ರಹ್ಮಚಾರೀ, ಆಶಾ ವಿಹಾರೀ
ವಸುಗಳದೊ ಕಾಯುವರು ವಸುಲೋಕದಲ್ಲಿ
ಅತ್ಮವೇ ಅರಳಿ ನೀ ಹೋಗು ಮರಳಿ.
ಶೋಕ, ಸಂತಾಪ, ಸೆಕೆ, ನಸು ಸೋಕದಲ್ಲಿ
ಮರಣವನು ನೀಗಿ ಮತ್ತಮರನಾಗಿ
ಸೇರು, ವೀರೋಚಿತದ ಆ ನಾಕದಲ್ಲಿ
ಕುಲಕಾಗಿ ಫಲಕಾಗಿ ಧರ್ಮಕ್ಕೆ ಕಾದಿ
ಶಾಂತರಿಗು ವೀರರಿಗು ಆದರ್ಶನಾದಿ
ಓ ಬ್ರಹ್ಮಚಾರೀ ಆಶಾ ವಿಹಾರೀ
ವಸುಗಳಗೊ ಕಾಯುವರು ವಸುಲೋಕದಲ್ಲಿ.

ಭೀಷ್ಮ :-
ಓಂ ಓಂ ಓಂ ಓಂಽ ಓಂ ಓಂಽ
ಕಳೆದೆ ಕಳೇವರ ಕವಚವ ಕಳಚುವ
ಕೈದುಗಾರನಂತೆ.
ಓಂ ಓಂಽ ಓಂ ಓಂಽ ಓಂ ಓಂಽ
ಕಳಾಧರನ ಈ ಕುಳಾರ್ಣವದ ಕಳೆ
ಭರತಿ ಏರಲೆಂತೆ.
ಓಂ ಓಂಽ ಓಂ ಓಂಽ ಓಂ ಓಂಽ.

(ಭೀಷ್ಮ ನಿರ್ಯಾಣದ ಕಹಳೆ ಘೋಷ.)

ಜಯ ಕೃಷ್ಣ ಹರೇ ಶ್ರೀಕೃಷ್ಣ ಹರೇ
ಜಯ ಕೃಷ್ಣ ಹರೇ ಶ್ರೀಕೃಷ್ಣ ಹರೇ.

೧ನೆಯ ಮೇಳ:-
ಭಾರತದ ಬಿಸಿಲಿನಲಿ ಹೊತ್ತ ಭೀಷ್ಮಜ್ವಾಲೆ
ಗಂಗಾ ಪ್ರವಾಹದಲಿ ನಂದಿತೀಗ
ಗಂಗಾ ಗ್ರವಾಹದಲಿ ಸಂದಿತೀಗ.

೨ನೆಯ ಮೇಳ:-
ಶ್ರೀಕೃಷ್ಣ ಕೃಪೆಯ ಕಿರಿಸೊಡರಾಗಿ ಅಭಿಮನ್ಯು
ಉತ್ತರೆಯ ಉದರದಲಿ ನಿಂದಿತೀಗ.
ಉತ್ತರೆಯ ಉದರದಲಿ ನಿಂದಿತೀಗ.

೧ನೆಯ ಮೇಳ:-
ಈ ಉತ್ತರಾಯಣಕೆ ಕಾದ ಭೀಷ್ಮರ ಕಣ್ಣು
ಮುಚ್ಚಿದವು ತೆರಿದಿತಗೊ ದೇವಯಾನ
ತೆರೆದಿತಗೊ ದೇವಯಾನ.

೨ನೆಯ ಮೇಳ:-
ದೇವ ದೇವತೆಗಳಿಗು ಆಯ್ತು ದೇವವೃತನ
ಭಕ್ತಿ ಚಾರಿತ್ರ್ಯವೇ ಅಮೃತ ಪಾನಾ.
ಭಕ್ತಿ ಚಾರಿತ್ರ್ಯವೇ ಅಮೃತ ಪಾನಾ.
(ದುಂದುಭಿ ಧ್ವನಿ)

೧ನೆಯ ಮೇಳ:-
ಭೀಷ್ಮ ದೇಹವು ಭಸ್ಮವಾಯಿತು
ರಶ್ಮಿಯಾಯಿತು ಉಜ್ವಲ
ತಿಲಸ್ನೇಹಕು ಕುಸುರು ಒಡೆದಿತು
ಕಳೆದು ಹೋಯಿತು ಕಶ್ಮಲ.

೨ನೆಯ ಮೇಳ:-
ಇಚ್ಛಾ ಮರಣಿಗೆ ಇಚ್ಛಾ ಪೂರ್ತಿಯೆ
ಸ್ವರ್ಗದ ಬಾಗಿಲ ತೆರೆವುದಲಾ.
ದರ್ಪಗಲಿತ ಸಂತೃಪ್ತಿಯಲ್ಲಿಯೇ
ತರ್ಪಣವೇ ಹರ್ಷಾಶ್ರುಜಲಾ.

ತರ್ಪಣಗಳು:-
ವಸೂನಾಮವತಾರಾಯ ಶಂತನೋರಾತ್ಮಜಾಯಚ
ಅರ್ಘ್ಯಂ ದದಾಮಿ ಭೀಷ್ಮಾಯ, ಆಬಾಲ ಬ್ರಹ್ಮಚಾರಿಣೇ.

ಧರ್ಮ:-
ಭೀಷ್ಮಃ ಶಂತನವೋ ವೀರಃ ಸತ್ಯವಾದೀ ಜಿತೇಂದ್ರಿಯಃ
ಅಭಿರಾದ್ಭಿಃ ಅವಾಪ್ನೋತು ಪುತ್ರ ಪೌತ್ರೋಚಿತಾಂ ಕ್ರಿಯಾಂ.

ಶ್ರೀಕೃಷ್ಣ:-
ವೈಯಾಘ್ರ ಪಾದ ಗೋತ್ರಾಯ ಸಾಂಕೃತ್ಯ ಪ್ರವರಾಯಚ
ಅಪುತ್ರಾಯ ದದಾಮ್ಯೇತದ್ ಜಲಂಭೀಷ್ಮಾಯ ವರ್ಮಣೇ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ಧರ್ಮ:-
ಕಂಡುದೆಲ್ಲ ಕನಸು ಎಂದು ಈಗ ತಿಳಿದು ಬಂದಿದೆ
ನಿದ್ದೆ ಮರೆಯ ಬದುಕೆ ಬೇರೆ ಎಂಬ ಅರಿವ ತಂದಿದೆ.
ಮುಗಿಲಿಗೇಕೊ ಮೂರ್ಚ್ಛೆ ಬಂದು ಕಣ್ಣು ಮುಚ್ಚುವಂತಿದೆ
ಕಣ್ಣ ಕುಕ್ಕಿ ಕಾಣ್ಕೆಯೊಂದು ದತ್ತೆನೆ ಇಗೊ ನಿಂದಿದೆ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ವ್ಯಾಸ:-
ಈ ಪ್ರಚಂಡ ಕಿರಣದಾ ಪ್ರಕಾಶದಲ್ಲಿ ಕಲ್ಪನೆ
ಅರ್ಥ ಮಾಡಿಕೊಳ್ಳುತಿಹುದು ಇದಿರಿಗಿದ್ದ ಸ್ವಲ್ಪನೆ
ಅಹಂ ಗ್ರಹಣ ಸರಿಯುತಿಹುದು ಇದಂ ಮುದ್ರೆ ಕಂಡಿದೆ
ಬಣ್ಣ ಬಣ್ಣದಾ ವಿಕಲ್ಪ ಬೆಳಕೇ ಒಳಗೊಂಡಿದೆ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ಕೃಷ್ಣ:-
ಭೂಮಿತಾಯಿ ನಡೆಯಿಸಿಹಳು ಸೂರ್ಯನಾ ಪ್ರದಕ್ಷಿಣೆ
ಅವಳ ತಾಪದಲ್ಲೆ ಇಹುದು ಅವಳ ತಪದ ರಕ್ಷಣೆ.
ಅವಳ ನೆರಳ ಬೆನ್ನಟ್ಟಿ ಅವಳಿಗಿರುಳ ತರುತಿದೆ
ಎಚ್ಚರದಾ ದುಡಿಮೆಯಲ್ಲಿ ದಣಿದು ನಿದ್ದೆ ಬರುತಿದೆ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ಧರ್ಮ:-
ಮರೆವಿನಾಳದಲ್ಲಿ ತಳದೊಳೆಲ್ಲೊ ಅರಿವು ಹೂತಿದೆ
ಕಾಯುತಿಹುದು ಫಲಿಸಲೆಂದು ಪಟ್ಟು ಹಿಡಿದು ಕೂತಿದೆ
ತೋರಲೆಂದು ಎತ್ತಿದಾಸೆ ಕಳಶದ ಕುಡಿ ಎತ್ತಿದೆ
ಮೌನದಲಿ ನವಭಾಷೆಯ ಮಾಂಗಲ್ಯವ ಬಿತ್ತಿದೆ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ವ್ಯಾಸ:-
ಯೋಗ ನಿದ್ರೆ ಗೈವ ಹರಿಗೆ ಶೇಷ ಶಯನ ಹಾಸನೇ
ಹೂವು ಬಾಡಲುಂಟು ತಾನಿರಸ್ತ ಗಂಧ ವಾಸನೇ
ಚಿತ್ರ ತೊಳೆದು ಹೋದರೇನು ನೆನವಿನೊಳಿದೆ ಆಕೃತಿ
ನಾಗರಿಕತೆ ಮುಳುಗಬಹುದು ಮೂಡಲುಂಟು ಸಂಸ್ಕೃತಿ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

ಕೃಷ್ಣ:-
ನರನ ಪ್ರಕೃತಿ, ನರರ ವಿಕೃತಿ ವೈರಲೀಲೆ ಬೆಳೆಸಿವೆ
ಕಳೆದುಕೊಂಡು ಬುದ್ಧಿಯನ್ನು ಜ್ಞಾನವನ್ನು ಗಳಿಸಿವೆ
ದ್ವಾಪರದಾ ಅಸ್ತಮಾನ ಕಲಿಯುಗವನೆ ತೆರದಿದೆ
ಅದರ ನೀಲ ಭಾಲದಲ್ಲಿ ಕೃತಕೃತ್ಯತೆ ಬರೆದಿದೆ.

ಮೇಳದವರು:-
ಮೂಡಲಿಹನು ಭಾಸ್ಕರಾ
ಪಡುವಲಿಹನು ಚಂದಿರಾ.

(ಉಚಿತ ಮಂಗಲ ಸಂಗೀತ ಪಾರ್ಶ್ವ ಭೂಮಿಯಲ್ಲಿ)

ಮೇಳದವರು:-
ನಮನ ಮಾಡುವೊಲು ಎವೆಗಳಿಳಿಸಿ ಕುಡಿ
ಬೆಳಗುತಿಹುದು ದೃಷ್ಟಿಽಽಽ.
ಓಂ ಓಂಽ ಜಯಕೃಷ್ಣ ಹರೇ,
ಓಂ ಓಂಽ ಜಯಕೃಷ್ಣ ಹರೇ.
ನಮೋ ಎನ್ನುತಿದೆ ಮನದ ಮಾತು ಮುಗಿ-
-ದಂತೆ ಸುಪ್ತ ಸೃಷ್ಟಿ.

ಓಂ ಓಂಽ ಜಯಕೃಪ್ಣ ಹರೇ,
ಓಂ ಓಂಽ ಜಯಕೃಷ್ಣ ಹರೇ.
ರವಿಯ ಕಿರಣಗಳು ನಮನ ಮಾಡುತಿವೆ
ಚತುಃಸಾಗರಕ್ಕೆಽಽ.

ಓಂ ಓಂಽ ಜಯಕೃಷ್ಣ ಹರೇ,
ಓಂ ಓಂಽ ಜಯಕೃಷ್ಣ ಹರೇ.

ಕಡಲ ನೀರು ದಿಂಡುರುಳಿ ಬರುತಲಿವೆ
ಜೀವದಾಗರಕ್ಕೆಽಽ.

ಓಂ ಓಂಽ ಜಯಕೃಷ್ಣ ಹರೇ,
ಓಂ ಓಂಽ ಜಯಕೃಷ್ಣ ಹರೇ.
ಮುಗಿಯಬೇಕು ತನು, ಮುಗಿಯಬೇಕು ಮನು
ಅರಳಬೇಕು ಅರಿವೂಽಽ.

ಓಂ ಓಂಽ ಜಯಕೃಷ್ಣ ಹರೇ,
ಓಂ ಓಂಽ ಜಯಕೃಷ್ಣ ಹರೇ,
ಹಿಗ್ಗ ಹರಹುವಾ ಮೊಗ್ಗೆಯಾಗದಿರೆ
ಏತಕಂಥ ಇರವೂಽಽಽ?

ಓಂ ಓಂಽ ಜಯಕೃಷ್ಣ ಹರೇ
ಓಂ ಓಂಽ ಜಯಕೃಷ್ಣ ಹರೇ
ಓಂ ಓಂಽ ಜಯಕೃಷ್ಣ ಹರೇ
ಓಂ ಓಂಽ ಜಯಕೃಷ್ಣ ಹರೇ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...