ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು.
“ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇವುಗಳ ಭಾರ, ಘನತೆ, ತೂಕ ಎಲ್ಲಾ ನನ್ನ ಭಾವಗಳನ್ನು ಕೆದಕಿತು. ಈ ಬೆಟ್ಟಗುಡ್ಡಗಳ ಕಾರ್ಯಭಾರ ಬಹಳ ಕಠಿಣವಿರಬೇಕೆಂದೆನಿಸಿತು. ಎಷ್ಟಾದರೂ ಕಲ್ಲುಗಳು ಇವು ಅಲ್ಲವೇ? ಇವುಗಳಿಗೆ ಹೃದಯವೆಲ್ಲಿ? ಇವು ಬರಿ ಬರಡು. ಬಂಡೆ ಮೈಯನ್ನು ಪ್ರಕೃತಿಗೆ ಒಡ್ಡಿ ಜಡವಾಗಿ ಯುಗದ ಉದ್ದಕ್ಕೂ ಬಿದ್ದಿರುವ ಇವುಗಳಿಂದ ಏನು ಪ್ರಯೋಜನ? ಎಂದೆಲ್ಲಾ ಯೋಚಿಸುತ್ತಿರುವಾಗ, ನನ್ನ ಹಿಂಬದಿಯಲ್ಲಿ ಕೂಡಲು ಆಸನದಂತಿದ್ದ ಗುಡ್ಡದಬಂಡೆ ನನ್ನ ಸ್ವಾಗತಿಸಿತು. ಆತ್ಮೀಯತೆ, ಆದರತೆಯಿಂದ ನನ್ನ ಕುಳ್ಳಿರಿಸಿತು. ನಡೆದು, ಸೋತ ನನ್ನ ಕಾಲುಗಳು ಪ್ರೀತಿಯ ಕರೆಯೋಲೆಗೆ ಸ್ಪಂದಿಸಿಯೋ ಎಂಬಂತೆ ಕುಳಿತು ಸುತ್ತ ನೋಡುತ್ತಿದ್ದೆ. ಆ ಬೆಟ್ಟಗುಡ್ಡಗಳ ವೈವಿಧ್ಯತೆ, ರೂಪ, ಸೌಂದರ್ಯ, ನುಣುಪು ಹೊಳಪು, ಆಕಾರ ಎಲ್ಲಾ ನನ್ನ ಮನವನ್ನು ಆಕ್ರಮಿಸಿತು. ಒಂದು ದೊಡ್ಡ ಬಂಡೆ, ಚಿಕ್ಕಬಂಡೆಯನ್ನು ತೊಡೆಯಲ್ಲಿಟ್ಟು ಕೂತಿತ್ತು ತಾಯಿ ಮಗುವಿನಂತೆ, ಪಕ್ಕದಲ್ಲಿ ಎರಡು ಸುಂದರ ನಿಲುವುಳ್ಳ ಗುಡ್ಡಗಳು ಪ್ರೇಮಿಗಳಂತೆ ಅತಿ ಸನಿಹದಲ್ಲಿ ನಿಂದು ಒಂದನ್ನೊಂದು ಮುತ್ತಿಕ್ಕುತ್ತಿದ್ದವು. ಮತ್ತೆ ಕೆಲವು ಒಂದರ ಮೇಲೊಂದು ಏರಿ ಸೃಷ್ಟಿ ಮಿಲನದ ಮಾಧುರ್ಯ ಸವಿಯುತ್ತಿದ್ದವು.
ಕೆಲವು ಗುಡ್ಡ ಬಂಡೆಗಳು ವಿರಕ್ತರಂತೆ ಏಕಾಂಗಿಗಳಾಗಿ ತಪದಲ್ಲಿದ್ದವು. ಮತ್ತೆ ಕೆಲವು ದೈವೀ ರೂಪದಲ್ಲಿ ರಾರಾಜಿಸುತಿತ್ತು. ಮತ್ತೆ ಕೆಲವು ದೊಡ್ಡ ಚಿಕ್ಕ ಬಂಡೆಗಳು ಒಟ್ಟು ಸೇರಿ ಸೃಷ್ಟಿಯ ನಿಗೂಢತೆ ಅರಿಯಲು ಸಮ್ಮೇಲನ ಮಾಡುತ್ತಿದ್ದವು.
ಇನ್ನು ಕೆಲವು ಸಸ್ಯ ಪ್ರೇಮಿಗಳಾಗಿ ಹುಲ್ಲು ಗಿಡಗಳ ಬಗಲಲ್ಲಿ ಕುಳಿತು ಅವುಗಳೊಡನೆ ಸಮರಸದಿಂದ ಬಾಳುತ್ತಿದ್ದವು. ಇನ್ನು ಕೆಲವು ಭೂಮಿ ತಾಯಿಯ ತೊಡೆಯ ಮೇಲೆ ದೀರ್ಘ ನಿದ್ದೆಯಲ್ಲಿದ್ದವು. ಇನ್ನು ಕೆಲವು ದಾರ್ಶನಿಕ ಬಂಡೆಗಳು ಆಗಸದ ಎತ್ತರಕ್ಕೆ ತಲೆಎತ್ತಿ ಸೃಷ್ಟಿಯ ಚಿಂತನೆಯಲ್ಲಿದ್ದವು. ಇಲ್ಲಿ ಎಲ್ಲಾ ಕಾರ್ಯಭಾರಗಳೂ ನಡೆದಿತ್ತು. ಆದರೆ ಇಲ್ಲಿ ಗೊಂದಲವಿಲ್ಲ, ಸದ್ದಿಲ್ಲ. ಎಲ್ಲಾ ಮೌನ ಸಾಮ್ರಾಜ್ಯ. ಮೌನದಲ್ಲಿ ರೂಪ, ಆಕಾರ, ಸಾಕಾರ, ಹೃದಯ ಭಾವ ಎಲ್ಲಾ ಝಂಕರಿಸಿತ್ತು. ಎಲ್ಲವೂ ಮೂಕ ವಿಸ್ಮಯದಿಂದ ಕೂಡಿತ್ತು. ಬಿಸಿಲು ಬಿದ್ದರು, ಬೆಳದಿಂಗಳು ಹರಿದರು, ಮಳೆಗರಿದರು, ಗುಡುಗಿದರು, ಮಿಂಚಿದರು, ಗಾಳಿ ಬೀಸಿದರು, ಮೋಡ ಚುಂಬಿಸಿದರು, ಒಂದೇ ಮೌನದ ಮುದ್ರೆ, ಒಂದೇ ಮೌನ ಸಮ್ಮತ. ಒಂದೇ ಮೌನಶಾಂತಿ, ಒಂದೇ ಮೌನ ನಿಶ್ಚಲತೆ, ಒಂದೇ ಮೌನ ಧೃತಿ. ಒಂದೇ ಮೌನ ಶೃತಿ.
ಇದನ್ನು ನೋಡುತ್ತಾ ನೋಡುತ್ತಾ ನನ್ನ ಹೃದಯ ಶೃತಿಗೆ ಶೃತಿಕೊಟ್ಟಿತು. ಗುಡ್ಡಹಾಡ ಗುನುಗಿತು. ಬೆಟ್ಟ ಭಾವಬೆಳೆಸಿತು, ಕಲ್ಲು ಕರುಣೆ ಹರಿಸಿತು, ಗುಡ್ಡಬಂಡೆಗಳ ಹೃದಯ ವೇದ ನುಡಿಯಿತು. ಸತ್ಯಕ್ಕೆ ಕನ್ನಡಿ ಇಟ್ಟವು. ಸೌಂದರ್ಯಕ್ಕೆ ಸಾಕಾರವಾದವು.
ಮೂಕ ವಿಸ್ಮಯದಲ್ಲಿ ನಾ ಗುಡ್ಡ ಬೆಟ್ಟವಾದೆ. ನನ್ನ ಮುಂದೆ ನಿಂತ ಗುಡ್ಡಬೆಟ್ಟ ಮಾನವತ್ವದಿಂದ ದೈವತ್ವಕ್ಕೆ ಬೆಳೆದುನಿಂತವು.
*****

















