ವಿಶ್ವಜನ್ಮ ಪೂರ್ವದಲ್ಲಿ
ಅನಾದಿ ಕಾಲದಾದಿಯಲ್ಲಿ
ಬ್ರಹ್ಮನಿರಲು ತಪಸಿನಲ್ಲಿ
ಕುಣಿದೆಯವನ ಎದುರಿನಲ್ಲಿ
ಕೊನರಿತೆನಲು ಮಿಂಚುಬಳ್ಳಿ
ಹೇ ಸುಂದರಕಲ್ಪನೆ
ಚಿರ ಜೆಲುವಿನ ಚೇತನೆ!
ಸುರಪ್ರಜ್ಞೆಯು ಉನ್ಮೇಷಿತ
ಲೀಲಾತುರ ಮನಸ್ಫೂರ್ತಿತ
ಈ ವಿಶ್ವವು ಉಲ್ಲೇಖಿತ-
ವಾಯ್ತು ಕಾಲಪಟದಲಿ
ನಿನ್ನ ಭವ್ಯ ಕಲೆಯಲಿ!
ನೀ ಬ್ರಹ್ಮನ ಕಮಲಾಸನ
ವಿಶ್ವ ಕವಿಯ ನವಿಲಾಸನ
ಕ್ಷಣ ಕ್ಷಣಗಳ ಪದ ಬಂಧನ
ಓಂಕಾರದ ಸ್ವರ ಸ್ಯಂದನ
ರಚಿತ ಕಾವ್ಯನಂದನ
ಚೆಲುವು ನೀ ಚಿರಂತನ!
ನೆಲಜಲಗಳ ಈ ಪರಿಸರ
ಜ್ಯೋತಿರ್ಮಯ ನೀಲಾಂಬರ
ದಿಗ್ದಂತಿಯ ತಟ ಸುಂದರ.
ತುಂಬಿ ಹರಿಯೆ ಸುಖ ಸಮೀರ
ಈ ಜೀವನವೇ ನಿರಂತರ
ದೇವ ನಾಟ್ಯಚಾಲಕ
‘ನಟಿ’ಯು ನೀನು ಕಲ್ಪಕ!
ಏಕಂ ಸತ್ ಹಲವಾಯಿತು
ಬಣ್ಣದ ಬಗೆ ಚೆಲುವಾಯಿತು
ಇಳೆನೇಸರ ಸುತ್ತರಿಯಿತು
ಹಗಲಿರುಳಿನ ಬೆಂಬತ್ತಿತು
ಋತುಋತುಗಳ ಕಳೆಯರಳಿತು
ಸೊಗದುಟಿಯಲಿ ಕಹಿಯಿಳಿಯಿತು
ಮುನ್ನಡೆಯಿತು ನಾಟಕ
ನವರಸಗಳ ಪೋಷಕ!
ನೀ ಚೆಲುವಿನ ಮೂಲ ಕಿರಣ
ಮನದಾಸೆಯ ಮಿಂಚಿನ ಕಣ
ಎದೆಯೊಲವಿಗೆ ಪ್ರಾಣಪವನ
ನೀನದಮ್ಯ ಚೇತನೆ
ಭಾವಸ್ಫುರಣ ಕಾರಣೆ!
ಅಳಿದು ಹೋದ ಜಗದೋರುವೆ
ನಾಳೆ ಬರುವ ಯುಗ ತೆರಿಯುವೆ
ಇಂದಿಗು ಚೆಲುವಿತ್ತು ಮೆರೆವೆ
ಲೋಕಕೆ ಸವಿದೋರುವೆ
ಮೋಹದಿ ಜನ ಬಿಗಿಯುವೆ!
ಹೇ ಕಲ್ಪನೆ ನೀನು ಮಮತೆ
ಸಾನುಭೂತಿ ಜಲದ ಒರತೆ
ಜನದೆದೆಯಲಿ ಕೊರೆವ ಕೊರತೆ
ನೀನು ತುಂಬಿ ತುಳುಕುವೆ
ಹಣೆಗೊಲವನು ಸವರುವೆ!
ಇದು ಮರಣದ ಘೋರ ಶಯ್ಯೆ
ಅಲ್ಲಿ ನಿಲಲು ನಿನ್ನ ಛಾಯೆ
ಯಮನೆಸಿಪನು ಮೋಹ ಮಾಯೆ
ನಮೋ ನಿನಗೆ ಕಾವ ತಾಯೆ!
ನಿಲ್ಲು ನಮ್ಮ ಹೃದಯದಿ
ಭಾವಸರಸ್ತೀರದಿ!
ನೀ ಕೆತ್ತಿದೆ ದೇವ ಮೂರ್ತಿ
ಮನದಿ ಬಿತ್ತಿ ಭಾವ ಭಕ್ತಿ
ದೇವನೊಲಿಪ ಸುಧಾಸೂಕ್ತಿ
ತೆರೆದು ತೋರೆ ಕೊನೆಯ ಮುಕ್ತಿ
ವೇದವೆಲ್ಲಿ ‘ನೇತಿ, ನೇತಿ’
ಅಲ್ಲಿ ಮಾರ್ಗದರ್ಶಿನಿ
ಮಂತ್ರ ಮುಗ್ಧ ಹಾಸಿನಿ!
ಜನವಾಗಿದೆ ಹಾಳು ಹೋಳು
ಕಹಿಯಾಗಿದೆ ಜಗದ ಬಾಳು
ಬರಡಾಗಿದೆ ಕೊರಡು ಕರುಳು
ತೆರೆ ನಿನ್ನಯ ತಾಯ ತೋಳು
ಒಲವಿನ ಸಿರಿ ತುಳುಕಲಿ
ಕೆಳೆಯ ಚೆಲುವು ಅರಳಲಿ!
ಎರಡಾಗಿರೆ ಹೆಣ್ಣು ಗಂಡು
ಜಗದಿರವಿನ ಕುಟಿಲ ಕಂಡು
ತೆರೆಯೆ ತಾಯೆ ಸ್ನೇಹಸದನ
ಎದೆ ಬೆರೆಯುವ ಬಂಧನ
ದೇವಿ ನಿನಗೆ ವಂದನ
ದೇವಲೋಕ ನಂದನ!
ನಾ ವಿರಹಿತ ದೈವಹೀನ
ಶೋಕ ವಿದ್ಧ ವಿಕಲ ದೀನ
ಬಾ ಕಲ್ಪನೆ, ಭಾಗ್ಯಕಿರಣ
ಪದ್ಮರಾಗ ನಿನ್ನ ಚರಣ
ನನ್ನೆದೆಯಲಿ ನಿಲ್ಲಲಿ
ಭಾವ ಭಕುತಿ ಬೆಳೆಯಲಿ!
ಬಾಳೆಂಬುದು ಮುಳ್ಳ ಕಂಟಿ
ಬೆಳೆಯಿತೆನ್ನ ರಕ್ತವೀಂಟಿ
ಬಾ ಕಲ್ಪನೆ, ಸ್ವರ್ಗ ದಾಂಟಿ
ನನ್ನೆದುರಲಿ ನಿಂದಿರೆ
ಹೇ ದೇವನ ಇಂದಿರೆ!
ಈ ಅಲುಗಿನ ಬಾಳಿನಲ್ಲಿ
ಮೊನೆ ಮುರಿಯುವ ಚೆಲುವ ಚೆಲ್ಲಿ
ಸಪ್ತ ವರ್ಣ ನೃತ್ಯ ಕೆರಳಿ
ಕಂಪು ತಂಪು ಹೊಮ್ಮಿ ಬರಲಿ
ಒಲವಿನ ಹೂ ಹರುಷ ನಿಲಲಿ
ಜ್ವಲದ್ದೀಪ ಮಲ್ಲಿಕೆ
ಬಾರೆ ಹೃದಯ ತಲ್ಪಕೆ!
ನಿನ್ನ ಒಲವು ನಿನ್ನ ಚೆಲುವು
ಸ್ವಪ್ನಲೋಕದಮಿತ ನಲಿವು
ನಮ್ಮ ಬಾಳಿಗಿದೇ ಬಲವು
ನಿನ್ನೆಡೆಯಲಿ ಜಗದ ಇರವು
ಬಾ ನಿಂದಿರು ಕಲ್ಪನೆ
ಇದೆಯೊಂದೇ ಪ್ರಾರ್ಥನೆ!
*****



















