Home / ಲೇಖನ / ಇತರೆ / ನಾ ಮಾಡಿದ ಕರ್‍ಮ ಬಲವಂತವಾದರೆ

ನಾ ಮಾಡಿದ ಕರ್‍ಮ ಬಲವಂತವಾದರೆ

‘ಹಿರಿದು ಕರ್‍ಮವ ಮಾಡಿ ಹರಿವ ನೀರೊಳು ಮುಳುಗೆ; ಕರಗುವುದೇ ಪಾಪ? ತಾ ಮುನ್ನ ಮಾಡಿದ್ದು ಎರೆಯ ಕಲ್ಲೆಂಟೆ ಸರ್ವಜ್ಞ’

ಮಾಡಿದ ಕರ್ಮಫಲ ಏನು ಮಾಡಿದರೂ ಬಿಟ್ಟು ಹೋಗುವುದಿಲ್ಲ. ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಗೇ ಬರುತ್ತದೆ ಎನ್ನುವ ಸರ್ವಜ್ಞನ ಮಾತಿನಂತೆ ಮಾಡಿದ ಕರ್ಮಫಲವನ್ನು ಅನುಭವಿಸಿಯೇ ತೀರಬೇಕು. ಮಾಡಿದುಣ್ಣೋ ಮಹಾರಾಯ ಎನ್ನುವ ಗಾದೆ ಮಾತೂ ಈ ಸಿದ್ಧಾಂತದಿಂದಲೇ ಹುಟ್ಟಿರಬೇಕು. ಮಾಡಿದ ಕರ್ಮ ಬಲವಂತವಾದರೆ ಈ ಜನ್ಮದಲ್ಲಿ ಅದರ ಫಲ ಅನುಭವಿಸಲಾಗದಿದ್ದರೆ ಮುಂದಿನ ಜನ್ಮಕ್ಕೂ ಅದು ಬೆನ್ನಟ್ಟಿಕೊಂಡು ಬರುತ್ತದೆ ಎನ್ನುವುದಕ್ಕೆ ಸತ್ಯ ಹರಿಶ್ಚಂದ್ರ ನಳ ಮಹಾರಾಜನಿಗಿಂತ ಬೇರೆ ಉದಾಹರಣೆ ಬೇಕೇ? ಸೀತೆ ಯಾವ ತಪ್ಪು ಮಾಡಿದ್ದಳೆಂದು ಅವಳಿಗೆ ಅಷ್ಟೊಂದು ಕಷ್ಟಗಳು ಎದುರಾದದ್ದು? ಇವತ್ತೂ ಎಷ್ಟೋ ಒಳ್ಳೆಯ ವ್ಯಕ್ತಿಗಳು ಕಷ್ಟಗಳ ಸರಮಾಲೆಗಳಿಗೆ ಸಿಕ್ಕಿ ಒದ್ದಾಡುವುದನ್ನು ನೋಡುವಾಗ ಏಳುವ ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬಸವಣ್ಣನವರೂ ಕರ್ಮಸ್ಥಿತಿ ಯಾವತ್ತೂ ಬೆನ್ನು ಬಿಡದು ಎಂದು ಹೇಳಿದ್ದಾರೆ. ಡಿವಿಜಿಯವರೂ ಕರ್ಮದ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆಸಿ ಕರ್ಮ ನಮ್ಮ ಮುಂದೆ ಒಂದು ಮೋಹಕ ರೂಪದಲ್ಲಿ ನಿಂತು ಕಾಡುತ್ತದೆ. ಆಕರ್ಷಿಸಿ ತಬ್ಬಿಕೊಂಡು ಮತ್ತೆ ಬೆಂಕಿಯಿಡುತ್ತದೆ, ‘ಪ್ರಾರಬ್ಧ ಕರ್‍ಮಮುಂ ದೈವಿಕ ಲೀಲೆಯುಂ’ ಎಂದಿದ್ದಾರೆ. ಮಾಡಿದ ಕರ್‍ಮ ಬಲವಂತವಾದರೆ ಅದರ ಫಲವನ್ನು ಅನುಭವಿಸದೆ ಬೇರೆ ದಾರಿಯಿಲ್ಲ.

ಗೀತೆಯಲ್ಲಿ ಶ್ರೀಕೃಷ್ಣನೂ ಹೇಳುವುದು ಇದನ್ನೇ. ಫಲಾಫಲಗಳ ಯೋಚನೆ ಬಿಟ್ಟು ನೀನು ಮಾಡಬೇಕಾದ ಕರ್‍ಮಗಳನ್ನು ಮಾಡು. ಮಾಡುವ ಕೆಲಸ ಕೆಟ್ಟದ್ದೋ ಒಳ್ಳೆಯದ್ದೋ ಅದು ದೈವ ನಿರ್‍ಧಾರ. ಆ ಕರ್‍ಮಗಳನ್ನು ಮಾಡಲು ನೀನು ನಿಮಿತ್ತ ಮಾತ್ರ. ದುಃಖಗಳು ಬಂದಾಗ ತಳಮಳಗೊಳ್ಳದೆ ಸುಖಗಳು ಬಂದಾಗ ಹೆಚ್ಚು ಸಂತಸಗೊಳ್ಳದೆ ಹೆದರಿಕೆ, ಸಿಟ್ಟು ಇಲ್ಲದವನಾಗಿ ಕರ್ಮಫಲಗಳನ್ನು ಅನುಭವಿಸುವವನೇ ಜ್ಞಾನಿ.

ಜೀವನ ಒಂದು ಯುದ್ಧದಂತೆ ಬಹಳ ರೋಚಕವಾದದ್ದು. ಕೊನೆ ಮೊದಲಿಲ್ಲದ ಆಟದಂತೆಯೂ ಹೌದು. ಇಲ್ಲಿ ಸೋಲು, ಗೆಲುವು ಗೌಣ. ಆಡುವುದೊಂದೆ ಮುಖ್ಯ. ಜೀವನದಲ್ಲಿ ಕಷ್ಟ, ಸೋಲುಗಳು ಅತಿ ಸಹಜವಾದ ಆಗುಹೋಗುಗಳು. ಇದರಿಂದ ನಾವು ಸಾಕಷ್ಟು ಪಾಠ ಕಲಿಯುತ್ತೇವೆ. ಮಾಡಿದ ಕರ್ಮಫಲಕ್ಕೆ ಅನುಗುಣವಾಗಿ ಕಷ್ಟ ಸುಖಗಳು, ನೋವು-ನಲಿವುಗಳು, ಸೋಲು-ಗೆಲುವುಗಳು ಹಾಸುಹೊಕ್ಕಾಗಿರುವ ಜೀವನವನ್ನು ಎದುರಿಸಲು ಸಾಕಷ್ಟು ಧೈರ್ಯ, ಆತ್ಮವಿಶ್ವಾಸ ಬೇಕಾಗುತ್ತದೆ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು.

ಸುಖ, ಸಂತೋಷಗಳನ್ನು ಈ ಜನ್ಮದಲ್ಲೋ ಹಿಂದಿನ ಜನ್ಮದಲ್ಲೋ ಮಾಡಿದ ಕರ್ಮಫಲಗಳಿಗೆ ತಾಳೆ ಹಾಕದಿದ್ದರೂ ಕಷ್ಟಗಳು ವಿಪರೀತ ವಾದಾಗ ಇದು ನಾವು ಮಾಡಿದ ಕರ್ಮಫಲ ಎನ್ನುವ ಭಾವ ಬಲವಾಗುತ್ತದೆ. ಈ ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕ ನಮಗೆ ಗೊತ್ತಿರುತ್ತದೆ. ಹಿಂದಿನ ಜನ್ಮದ ಲೆಕ್ಕ ಹಿಂದಿನ ಜನ್ಮದ ಕಡತ ಬರೆದಿಡುವವನಿಗೇ ಗೊತ್ತು. ಯಾವ ಕರ್ಮಕ್ಕೆ ಈ ಶಿಕ್ಷೆ ಎಂದು ಅರ್ಥವಾಗದೆ ಈ ಜನ್ಮದಲ್ಲಿ ಶಿಕ್ಷೆ ಅನುಭವಿಸುವುದರಲ್ಲಿ ಯಾವ ನ್ಯಾಯ ಇದೆ ಎನ್ನುವುದು ನಿಗೂಢ ರಹಸ್ಯ. ಯಾರಿಗೂ ಅರ್ಥವಾಗುವಂತದ್ದಲ್ಲ. ನಾನು ಯಾವತ್ತೂ ಈ ಕರ್ಮ ಸಿದ್ಧಾಂತದ ಬಗ್ಗೆ ತಲೆ ಕೆಡಿಸಿಕೊಂಡಿದ್ದವಳಲ್ಲ. ಈ ಜನ್ಮದಲ್ಲಿ ಮಾಡಿರುವ ಒಳಿತು-ಕೆಡುಕುಗಳೇ ನಮ್ಮ ಜೀವನದ ಕಷ್ಟ-ಸುಖಗಳನ್ನು ನಿರ್ಧರಿಸುತ್ತವೆ ಎನ್ನುವುದನ್ನು ಬಲವಾಗಿ ನಂಬಿದ್ದವಳು. ಆದರೆ, ನನ್ನ ನಂಬುಗೆಯನ್ನು ಮೀರಿ ಆಘಾತಗಳು ಎದುರಾದಾಗ ಇದು ನಾ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲವೇ ಇರಬೇಕು ಎಂದು ಅನಿಸಲು ಶುರುವಾಗಿರುವುದಂತೂ ನಿಜ.

ಕರ್ಮಫಲ ಬಲವಂತವಾಗಿರಬಹುದು. ಅದರಿಂದ ಸಾಕಷ್ಟು ಕಷ್ಟ ನಷ್ಟಗಳನ್ನೂ ಎದುರಿಸಬೇಕಾಗಬಹುದು. ಪದೇ ಪದೇ ಎದುರಾಗುವ ಆಘಾತಗಳು ತಂದೊಡ್ಡುವ ನೋವುಗಳು ಆತ್ಮವಿಶ್ವಾಸಕ್ಕೆ ಡಿಕ್ಕಿ ಕೊಡುವಾಗ ಸೋತು ಕುಸಿಯಲೂ ಬಹುದು. ಇನ್ನು ಏಳುವುದೇ ಅಸಾಧ್ಯ ಎಂದೂ ಅನಿಸಬಹುದು. ಆದರೆ, ಏನೇ ಆದರೂ ಈಸಬೇಕು ಇದ್ದು ಜೈಸಬೇಕು ಎನ್ನುವುದನ್ನು ತಿಳಿದುಕೊಂಡರೆ ಜೀವನದ ಮಹಾ ಯುದ್ಧದಲ್ಲಿ ಕೊನೆಗಾದರೂ ಗೆಲ್ಲಬಹುದು. ಏನೇ ಆಗಲಿ ಎಲ್ಲವನ್ನೂ ಎದುರಿಸಿಯೇ ಎದುರಿಸುತ್ತೇನೆ ಎನ್ನುವ ಛಲವಿದ್ದರೆ ಯಾವುದೇ ಕರ್ಮಫಲವನ್ನಾದರೂ ಛಾತಿಯಿಂದ ಎದುರಿಸಬಹುದು ಎನ್ನುವುದು ನಾನು ಕಂಡುಕೊಂಡಿರುವ ಸತ್ಯ.

ಬದುಕು ನಮ್ಮ ಕೈಯಲ್ಲಿ ಇಲ್ಲ. ಅದನ್ನು ನಡೆಸುವವನು ನಮ್ಮ ಕಣ್ಣಿಗೆ ಕಾಣದ ಸಾರಥಿ. ಅವನ ಮೇಲೆ ನಂಬುಗೆಯಿಟ್ಟು ಅವನು ಕರೆದುಕೊಂಡು ಹೋದ ಕಡೆಗೆ ಹೋದರೆ ಜೀವನದಲ್ಲಿ ಎದುರಿಸಬೇಕಾದ ಹೋರಾಟ ಸುಲಭವಾದೀತು.

ಬದುಕೊಂದು ಕದನವೆಂದಂಜಿ ಬಿಟ್ಟೋಡುವವನು ಬಿದಿಯ ಬಾಯಿಗೆ ಕವಳವಾಗದುಳಿವನೇ?

ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೊಲಿವ ಮಂಕುತಿಮ್ಮ.

ಕರ್ಮಫಲಗಳಿಗಂಜಿ ಬದುಕನ್ನು ಬಿಟ್ಟೋಡುವ ಹೇಡಿತನವನ್ನು ಯಾರೂ ತೋರಬಾರದು. ಬದುಕು ಇರುವುದು ಬದುಕಿ ತೋರಿಸಲಿಕ್ಕೆ ಅಲ್ಲದೆ ಸೋತು, ಕುಸಿಯುವುದಕ್ಕೆ ಅಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...