ಮೂಲ: ಮೋತಿಲಾಲ್ ಜೋತ್ವಾನಿ (ಸಿಂಧಿ ಕವಿ)
ದಕ್ಷಿಣ ಭಾರತದಲ್ಲಿ ಚೆಂಗಲ್‌ಪೇಟೆ, ಅಲ್ಲಿ
ತಿರುಕ್ಕುಳಕ್ಕುಂಡ್ರಂ ಎಂಬ ಪುಟ್ಟ ಊರಲ್ಲಿ
ಪ್ರಸಿದ್ಧವಾಗಿದೆ ಒಂದು ಬೆಟ್ಟದಲ್ಲಿನ ಗುಡಿ;
ದಿನವೂ ಮಧ್ಯಾಹ್ನದಲ್ಲಿ
ಗೊತ್ತಾದ ಹೊತ್ತಿನಲ್ಲಿ
ಇಳಿಯುತ್ತವೆ ಜೋಡಿ ಹಕ್ಕಿ
ಆ ದೇವಾಲಯದ ನೆತ್ತಿಯಲ್ಲಿ
ದೇವಾಲಯದ ಮುಂದೆ ಭಾರೀ ಜನಸ್ತೋಮ.
ಗಂಭೀರ ಗತಿಯಲ್ಲಿ ನಡೆದು ಬಂದರೆ ಹಕ್ಕಿ
ದಾರಿಬಿಡುವರು ಮಂದಿ ಹಿಂದೆ ಸರಿದು,
ಕಾದಿರುವ ಪೂಜಾರಿ ಸಾಷ್ಟಾಂಗ ಎರಗುವನು
ಭಯಭಕ್ತಿಯಿಂದ ಅವುಗಳೆದುರು.
ನಡೆಯುವುದು ಶಿವಪೂಜೆ ಗಂಟೆ ಬಡಿದು
ನಗಾರಿ ಹೊಡೆದು.
ಸಿಹಿ ಹುಗ್ಗಿ ನೈವೇದ್ಯ ಶಿವಮೂರ್ತಿಗೆ
ಬಡಿಸುವನು ಪೂಜಾರಿ ಹಕ್ಕಿಗಳಿಗೆ
ಬಟ್ಟಲು ತುಂಬ ಪ್ರಸಾದ ಹೊಟ್ಟೆ ತುಂಬ ತಿಂದು
ಮತ್ತೆ ಜಿಗಿವುವು ಹಕ್ಕಿ ಗಾಳಿಯಲ್ಲಿ,
ಸುತ್ತುವುವು ಮೂರು ಸಲ ಗುಡಿ ಶಿಖರವನ್ನು
ಬಿಚ್ಚಿ ರೆಕ್ಕೆಯ ಧೀರ ಠೀವಿಯಲ್ಲಿ.
ನೀಲಾಗಸದ ಕೆಳಗೆ ಬಿಳಿ ಹಾಯಿಗಳ ಜೋಡಿ
ಚೆಲುವು ಪ್ರೀತಿಗೆ ಕೂಡಿ ಕಣ್ಣಮೋಡಿ,
ಎಲ್ಲಿಂದ ಬರುವುವೋ ಎಲ್ಲಿ ಸಾಗುವುವೋ
ಯಾರೂ ತಿಳಿಯರು ಇದರ ಗೂಢವನ್ನು
ಜನ ಹೇಳುವರು ಒಂದು ಐತಿಹ್ಯವನ್ನು.
ಅರುಣೋದಯದ ವೇಳೆ ಹಿಮಾಲಯದ ತಡಿಯಿಂದ
ಹೊರಡುವುವು ಹಕ್ಕಿ ಗಿರಿಗೆ ನಮಿಸಿ,
ದಕ್ಷಿಣಕ್ಕೆ ಹಾಯುತ್ತ ಕಾಶಿಯನ್ನು ಸೇರಿ
ಗಂಗೆಯಲಿ ಮೀಯುವುದು, ಮತ್ತೆ ಹಾರಿ
ಈ ಗುಡಿಗೆ ಬಂದು ನೈವೇದ್ಯ ಪಡೆದು
ತ್ರಿಪ್ರದಕ್ಷಿಣೆ ಸಲಿಸಿ ಶಿವಮೂರ್ತಿಗೆ
ಸಾಗುವುವು ಮುಂದೆ ರಾಮೇಶ್ವರಕ್ಕೆ
ಅಲ್ಲಿ ಸಂಧ್ಯೆಯನ್ನು ಆಚರಿಸಲಿಕ್ಕೆ
*****
















