Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೫

ಸಂಗಪ್ಪನ ಸಾಹಸಗಳು – ೫

ಹಿಂದಿನ ಘಟನೇನೆ ಮುಂದುವರಿಸಿ ಸೀನಣ್ಣನ ವಿಚಾರಕ್ಕೆ ಬರಬಹುದು ಅಂತ ನೀವು ಭಾವಿಸಿದ್ದರೆ ನಿರಾಶೆಯಾಗುತ್ತೆ. ಇಷ್ಟಕ್ಕೂ ನೀವು ಹಾಗೆ ಭಾವಿಸಿದ್ದೀರಿ ಅಂತ ನಾನ್ಯಾಕೆ ಭಾವಿಸಲಿ ? ಯಾವುದೋ ಬರವಣಿಗೆಗೆ ತನ್ನದೇ ಆದ ಒಂದು ಚೌಕಟ್ಟು ಇರುತ್ತೆ ಮತ್ತು ಅದರಲ್ಲಿ ಎಷ್ಟು ವ್ಯಾಪಕವಾಗಿ ಕೆಲಸ ನಡೆದಿದೆ ಅನ್ನೋದು ಮುಖ್ಯ ಅನ್ನೋದು ಗೊತ್ತಿಲ್ಲದಷ್ಟು ದಡ್ಡರು ನೀವು ಅಂತ ಯಾಕೆ ಭಾವಿಸಬೇಕು ನಾನು ? ಇಲ್ಲಿ ಸೀನಣ್ಣನ ಸಮಾಚಾರಕ್ಕಿಂತ ಸಂಗಪ್ಪನ ಸಂಗತಿ ಪ್ರಧಾನ ಅನ್ನೋದು ನಿಮಗೆ ಈಗಾಗ್ಲೆ ಗೊತ್ತಾಗಿರುತ್ತೆ ಮತ್ತು ಸೀನಣ್ಣ ಸಾಕಷ್ಟು ಹಣ ಪಡೆದದ್ದರಿಂದ ಅವನ ಪಾಡು ಹೇಗೋ ಆಗುತ್ತೆ ಅನ್ನೋದು ನಿಮಗೆ ಅರ್ಥವಾಗೇ ಇರುತ್ತೆ. ಜೊತೆಗೆ ಸೀನಣ್ಣ ಸಂಗಪ್ಪನ ಮುಂದೆ ಹಾಕಿದ ಒಂದು ಗ್ಯಾರಂಟಿ ಗುಳಿಗೇನೂ ನೆನಪಿರಬೇಕಲ್ವೆ?… ಯಾವುದು… ? ಯಾವದದು ? ತಲೆ ಕೆರ್ಕೊಳೊ ಹಾಂಗಾಯ್ತು… ? ಅದೇ ಆ ಪದ್ಯದ ವಿಷಯ; ರಾಜೇಂದ್ರ ಸಂಗಪ್ಪನ ಹೊಟ್ಟೆಯನ್ನು ಹಾಡಿ ಹೊಗಳಿದ’ ಪದ್ಯದ ವಿಷಯ.

ನಮ್ಮ ದೇಶದ ಒಂದು ವೈಶಿಷ್ಟ್ಯ ಅಂದ್ರೆ, ಬಹಳ ಕಡಿಮೆ ಜನಕ್ಕೆ ತಲುಪೊ ಸಾಹಿತ್ಯದ ಅಥವಾ ಒಟ್ಟಾರೆ ಬರವಣಿಗೆಯ ಬಗ್ಗೆ ನಮ್ಮ `ಪ್ರಭುವರೇಣ್ಯರು’ ತೋರಿಸೋ ಆಸಕ್ತಿ. ಅದು ಕಡಿಮೆ ಜನಕ್ಕೆ ತಲುಪಿದರೂ ಒಂದು ಶಕ್ತ ದಾಖಲೆಯಾಗೋದ್ರಿಂದ ಚರಿತ್ರೆಲಿ ದಾಖಲೆಗಳು ಮುಖ್ಯ ಅನ್ನಿಸಿರೋದ್ರಿಂದ ಈ ಬಗ್ಗೆ ತಲೆ ಕೆಡಿಸ್ಕೊಳ್ತಾರೆ. ಹಿಂದಾದ್ರೆ ರಾಜರ ಆಸ್ಥಾನದಲ್ಲಿ ಕವಿಗಳು ಇದ್ದರು. ಸಾಹಿತ್ಯ ರಚಿಸ್ತಾ ಇದ್ದರು. ಅವರದೇ ಬೇರೆ ರಖಂ. ರಾಜನನ್ನು ಹೊಗಳೋದು ಅಥವಾ ರಾಜನ ಬಳಿಯಿದ್ದು ಸ್ವತಂತ್ರ ಪ್ರವೃತ್ತಿ ತೋರೋದು. ಇನ್ನು ಕೆಲವರು ಆಸ್ಥಾನ ದೂರವಾಗಿಯೇ ಇರೋದು – ಹೀಗೆ ಏನೇನೋ ನಡೆದಿದೆ. ಅಂದಂದಿನ ಚರಿತ್ರೆಯ ಸಂದರ್ಭವನ್ನು ಲೆಕ್ಕದಲ್ಲಿಟ್ಟುಕೊಂಡೇ ಇದನ್ನೆಲ್ಲ ತೂಕ ಮಾಡಬೇಕು. ಇದೆಲ್ಲ ಯಾಕೆ ಹೇಳ್ದೆ ಅಂದ್ರೆ ಇವತ್ತಾದ್ರೂ ನಮ್ಮ ನಾಯಕರಿಗೆ ಬರವಣಿಗೆ ರೂಪದಲ್ಲಿ ಪ್ರಶಂಸೆ ಮಾಡಿಸ್ಕೊಳ್ಳೋ ಆಸೆ ಬೆಟ್ಟದಷ್ಟಿದೆ. ಇವತ್ತು ಪ್ರಜಾಪ್ರಭುತ್ವದಲ್ಲಿದ್ದೇವೆ ಅಂತ ನಾವು ಹೇಳ್ಕೊಳ್ತೆವೆ. ಅನಕ್ಷರ ದೇಶ ಇದು ಅನ್ತೇವೆ. ಆದರೆ ಪ್ರಜೆಗಳ ಹೆಸರಿನಲ್ಲಿ ಪ್ರಭು ಆಗಿರೋರ ಕಣ್ಣು ಅಕ್ಷರಸ್ಥರ ಮೇಲೆ ಇದ್ದೇ ಇರುತ್ತೆ. ಅಕ್ಷರ ಶಕ್ತಿಯ ಬಗ್ಗೆ ಅವರಿಗೆ ವಿಶ್ವಾಸ ಇರೋದ್ರಿಂದ್ಲೆ ಪ್ರಜೆಗಳ ಹೆಸರಿನಲ್ಲಿ ‘ಪ್ರಭು’ಗಳ ಕಡೇನೇ ಅದು ಇರಲಿ ಅಂತ ಆಶೆ; ಆಸಕ್ತಿ. ಇದಕ್ಕೆ ನಮ್ಮ ಸಂಗಪ್ಪನೇನೊ ಅಪವಾದವಲ್ಲ, ಆದರೆ ಇಲ್ಲೀವರೆಗೆ ಅವನಿಗೆ ಇಂಥ ಸಮಸ್ಯೆ ಎದುರಾಗಲಿಲ್ಲ. ಊರಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆಯಿದ್ದರೂ ರಾಮು ಬರೆದ ಪದ್ಯದ ಬಗ್ಗೆ ಕಾಳಜಿ ಹೆಚ್ಚಾಯಿತು. ಅದೇನು ಬರೆದಿದ್ದಾನು ಅಂತ ಯೋಚನೆಗಿಟ್ಟುಕೊಂಡಿತ್ತು. ತಲೆತುಂಬ ಗುಂಗಾರಿಗಳ ಗದ್ದಲ; ಕೊರೆತಕ್ಕೆ ಸಿಕ್ಕಿದ ಮನಸ್ಸಿನ ನೆಮ್ಮದಿ ನೂರು ಮೇಲಿ ಹೋದರೂ ಗಟ್ಟಿ ಮಾಡ್ಕೊಳ್ಳೋ ಪ್ರಯತ್ನ ಮಾಡಿದ. ಅವನ ಪದ್ಯ ಎಷ್ಟು ಜನ ಕೇಳಿಯಾರು ? ಒಂದು ವೇಳೆ ತೆಗಳಿಕೆ ಇನ್ನೂ ಅದಿನ್ನೆಷ್ಟು ಜನಕ್ಕೆ ತಲುಪಿತು… ಹೀಗೆ ಸಮಾಧಾನ ಮಾಡ್ಕೊಳ್ತಾ ಬಂದರೂ ಅದ್ಯಾಕೊ ಪೂರ್ತಿ ಸಮಾಧಾನ ಆಗಲಿಲ್ಲ. ಶಾನುಭೋಗರ ಹತ್ರ ಹೇಳಿದಾಗ ಅವರು “ನಂಗೂ ಸುದ್ದಿ ಬಂತು; ಅದ್ಯಾಕ್ ಯೋಚ್ನೆ ಮಾಡ್ತೀರಿ; ದುಡ್ಡು ಎಸುದ್ರೆ ಇದ್ರಪ್ಪನಂಥ ಪದ್ಯ ಬರೋರ್ ಸಿಗ್ತಾರೆ” ಅನ್ನೋದೆ ? ಸಂಗಪ್ಪನಿಗೆ ಇನ್ನೂ ಗಾಬರಿಯಾಯ್ತು. “ದುಡ್ಡು ಕೊಟ್ಟು ಬರೆಸಿ ಬಯ್ಯಸ್ಕೊಳೋದೆಲ್ಲಾದ್ರೂ ಉಂಟೇ” ಎಂದ. ಶಾನುಭೋಗರು ಫಕ್ಕನೆ ನಕ್ಕು “ನಾನು ಅಷ್ಟು ದಡ್ಡನೆ ? ದೊಡ್ಡ ಮನುಷ್ಯರನ್ನು ಬಯ್ದು ಒಬ್ಬ ಪದ್ಯ ಬರುದ್ರೆ ಹೊಗಳಿ ಬರೆಯೊ ಚತುರ ಕವಿ ಶ್ರೇಷ್ಠರು ನೂರು ಜನ ಸಿಗ್ತಾರೆ. ನಿಮ್ಮಂಥ ಸಮಾಜಶಕ್ತಿ ಶ್ರೇಷ್ಠರನ್ನು ಎದುರು ಹಾಕಿಕೊಳ್ಳೋ ಮೂರ್ಖತನ ತೋರಿಸೋದುಂಟೆ ಕನ್ನಡ ಕವಿಪುಂಗವರು ? ನನಗೇ ಗೊತ್ತಿದ್ದ ಹಾಗೆ ಅದೆಷ್ಟು ಜನ ಸ್ವಾಮಿಗಳನ್ನು ಹಾಡಿ ಹೊಗಳಿಲ್ಲ ? ಮಠಗಳಲ್ಲಿ ಗೂಟ ಹೊಡಕೊಂಡು ಕೂತಿಲ್ವ ? ಅದೆಷ್ಟು ಜನ ನಾಯಕಮಣಿಗಳಿಗೆ ಕವಿತಾ ಮಣಿಗಳನ್ನು ಅರ್ಪಿಸಿಲ್ಲ ? ಅಷ್ಟೊಂದು ಇಷ್ಟ ಇದ್ರೆ ಹೇಳಿ ಈಗ್ಲೆ ಈಗಿಂದೀಗ್ಲೆ ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸಿ ಭಾಮಿನಿ ಷಟ್ಪದೀಲಿ ನಾನೇ ಸ್ವತಾಃ ನಾನೇ – ಒಂದು ಪದ್ಯ ಬರೆದು ಬಿಡ್ತೀನಿ. ಅದ್ಯಾಕೆ ಹಾಗೆ ಯೋಚ್ನೆ ಮಾಡ್ತೀರಿ; ಸುಮ್ನಿರಿ” – ಎಂದು ಒಂದೇ ಉಸಿರಿಗೆ ಹೇಳಿದಾಗ ಸಂಗಪ್ಪ ಶಾನುಭೋಗರ ವಾಕ್ ಚಾತುರ್ಯಕ್ಕೆ ತಲೆದೂಗಿ “ಸಮಯ ಬಂದಾಗ ನಿಮ್ಮಿಂದಲೇ ಬರೆಸೋಣ. ಆದರೆ ಸ್ಥಳೀಯರಿಗಿಂತ ಹೊರಗಡೆಯವರ ಹೊಗಳಿಕೆ ಮುಖ್ಯ ನೋಡಿ…” ಎಂದು ರಾಗ ಎಳೆದ. ಶಾನುಭೋಗರಿಗೆ “ಎಲಾ ಇವ್ನಾ” ಎನ್ನಿಸಿ “ಅದ್ಸರಿ ಸಾವ್ಕಾರ್ರೆ, ಆಗ ನನ್ನ ಗತಿ ? ಸ್ಥಳೀಯರಿಗೇ ಆದ್ಯತೆ ಅಂತ ದಿನ ಬೆಳಗ್ಗೆ ನಮ್ಮ ಜನ ಬಡ್ಕೊಳ್ತಾರೆ. ಅಂತಾದ್ರಲ್ಲಿ..” ಎಂದು ಹೇಳುತ್ತಿರುವಾಗಲೇ “ನಿಮ್ಮನ್ನು ಬಿಡೋಕಾಗುತ್ತ ಎಲ್ಲಾದ್ರೂ; ಸಮಯ ಬಂದಾಗ ಇಬ್ಬರೂ ಬೇಕು” ಎಂದ ಸಂಗಪ್ಪ. ಶಾನುಭೋಗರು “ತುಂಬಾ ತಾಪತ್ರಯದಲ್ಲಿದ್ದೆ; ಮಹಾಪ್ರಭುಗಳು ದೊಡ್ಡ ಮನಸ್ಸು ಮಾಡಿ…” ಎನ್ನುತ್ತಿರುವಾಗಲೇ ಹತ್ತರ ಐದು ನೋಟುಗಳು ಕೈಯಲ್ಲಿದ್ದವು. “ಪದ್ಯವಂತೆ ಇವ್ನಿಗೆ ಪದ್ಯ; ಸಾಹಿತ್ಯದ ಗಂಧ ಇದ್ಯಾ ಈ ಮುಂಡೇದುಕ್ಕೆ” ಅಂತ ಒಳಗೆ ಚಿಟುಕುಮುಳ್ಳಾಡುಸ್ತ ಶಾನುಭೋಗರು ಹೋದರೆ “ಇವತ್ತು ಐವತ್ತು ಕೊಟ್ಟಿದ್ದೇನು ಮಹಾ, ಐನೂರರ ಕೆಲ್ಸ ತಗತೀನಿ; ಇವನ್ ಬುದ್ಧಿ ನನಗೆ ಬೇಕಾಗ್ತೈತೆ” ಅಂತ ಸಂಗಪ್ಪ ಸಂತೋಷವಾಗೇ ಇದ್ದ.

ಮೂರ್ನಾಲ್ಕು ದಿನಗಳಲ್ಲಿ ಪದ್ಯದ ಕಡಿತ ಕಡಿಮೆಯಾಗ್ತಾ ಬಂತು. ಸಂಗಪ್ಪ ಹೊಲದ ಕಡೆ ಹೊರಟ; ಅದೇ ಮಾಮೂಲು ಠೀವಿ; ಕೈಯಲ್ಲಿ ವಾಕಿಂಗ್ ಸ್ಟಿಕ್; ಏನೋ ಗಜಗಂಭೀರ ನಡಿಗೆಯನ್ನು ಆರೋಪಿಸಿಕೊಳ್ಳೊ ಪ್ರಯತ್ನ; ಹೀಗೆ ಹೋಗ್ತಾ ಇರೋವಾಗ ಇದ್ದಕ್ಕಿದ್ದಂತೆ ಯಾರೋ ಹಾಡು ಹೇಳ್ತಿರೋದು ಕೇಳಿಸಿ ನೋಡಿದ. ಅರಳೀಮರದ ಕಟ್ಟೆಯ ಮೇಲೆ ರಾಜೇಂದ್ರ, ಸೋಮು, ಭೀಮು ಮುಂತಾದವರ ಗುಂಪು ಕೂತಿದೆ. ಕಾಲಳ್ಳಾಡಿಸ್ಕೊಂಡು ಚಪ್ಪಾಳೆ ತಟ್ಟಿಕೊಂಡು ಹಾಡು ಹೇಳ್ತಾ ಇದಾರೆ. ಅದೂ ತನ್ನ ಮೇಲೆ ಬರೆದದ್ದು.

ಸಾವ್ಕಾರ ಬಿಚ್ಚಿದ ಬೆಲೆ ಬಾಳೊ ಬಟ್ಟೆ
ಕಾಣುಸ್ತು ನೋಡ್ರಣ್ಣ ದೊಡ್ಡ ಹೊಟ್ಟೆ
ಹೊಟ್ಟೆ ಒಳ್ಗೆ ಏನಿಲ್ಲ? ಎಲ್ಲ ಐತೆ;
ಈ ಊರಿನ್ ಇತಿಹಾಸ ತುಂಬಿಕೊಂಡೈತೆ ||
ಊರಿನ ಜನರಿಗೆ ಕೈಯೆಲ್ಲ ಕೆಸರು
ಕೂತಿದ್ದ ಭೂ-ಪತಿಗೆ ಬಾಯೆಲ್ಲ ಮೊಸರು
ಕಂಡೋರ ಹೊಲದಲ್ಲಿ ಹಿಂಡೆಲ್ಲ ದುಡಿದರೂ
ಬೀದಿಬೀದೀಲೆಲ್ಲ ಬೆವರಾಗಿ ಹರಿದರೂ
ಅವರೆಲ್ಲ ದುಡಿದದ್ದು ಇವನಿಗೆ ಬಂತು
ಮಿಂಡುಗಾರನ ಹೊಟ್ಟೆ ಮುಂದಕ್ಕೆ ಬಂತು ||

ಸಂಗಪ್ಪನಿಗೆ ಅವರನ್ನೆಲ್ಲ ನಿಂತ ನಿಲುವಿಗೇ ನೇಣು ಹಾಕಿಬಿಡಲೆ ಅನ್ನುವಷ್ಟು ಸಿಟ್ಟು; ಆದ್ರೆ ಏನೂ ಮಾಡೋಕೆ ಆಗೊಲ್ಲ ಅನ್ನೋ ಅಸಹಾಯಕತೇಲಿ ವಿಲವಿಲ ಒದ್ದಾಡಿದ. ಸರಕ್ಕನೆ ತಿರುಗಿ ಮನೆಗೆ ಬಂದು ಶಾನುಭೋಗರಿಗೆ ಹೇಳಿಕಳಿಸಿದ.

ಶಾನುಭೋಗರು ಬಂದರು; ವಿಷಯ ತಿಳಿಸಿದ. “ಅದೇನ್ ಮಹಾಬಿಡಿ” ಎಂದರು. ಸಂಗಪ್ಪನಿಗೆ ಹುರಿದು ನುಂಗಿ ಬಿಡಲೆ ಎನ್ನಿಸಿತು. “ಏನ್ರಿ ಹಂಗಂದ್ರೆ? ಎಂದ. “ಅಯ್ಯೋ ಅದೇನ್ ಮಹಾಬಿಡ್ರಿ ಹಾಳ್ ಪದ್ಯ; ಅದೇನಾರ ಬರ್ಕಳ್ಳಿ ಛಂದಸ್ಸು ಬೇಡವೆ? ಬಯ್ದರೂ ಛಂದಸ್ಸು ಇರ್ಬೇಕು. ಆಲ್ಲೇ ಅದಕ್ಕೆ ಕಳೆ ಬರೋದು.” ಎಂದು ತನ್ನ ಮೀಮಾಂಸೆ ಮಂಡಿಸತೊಡಗಿದಾಗ ಸಂಗಪ್ಪನಿಗೆ ಏನಾಗಿರಬೇಡ?

“ರೀ ನಿಮ್ಮ ಬುದ್ಧಿಗಷ್ಟು ಬೆಂಕಿ ಹಾಕ, ನನ್ನ ಗತಿ ಹೇಳ್ರೀ…”

“ಸ್ವಲ್ಪ ಇರೀ ಸ್ವಾಮಿ; ಯಾಕೆ ಆತುರ? ಆತುರದೋರ್ಗೆ ಬುದ್ಧಿಮಟ್ಟ ಅಂತಾರಲ್ಲ ಹಾಗಾಗುತ್ತೆ ನೋಡಿ. ಸ್ವಲ್ಪ ಕಿವಿ ನಿಮಿರಿಸಿ ಕೇಳಿ ಒಂದು ಪದ್ಯ ಹೇಳ್ತನೆ..” ಎಂದವರೆ ಶಾನುಭೋಗರು “ಆರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ” ಎಂದು ಶುರುಮಾಡಿ ಕುಮಾರವ್ಯಾಸ ಕವಿಯ ಪೂರ್ತಿ ಪದ್ಯವನ್ನು ಒಂದೇ ಉಸುರಿಗೆ ಹೇಳಿ “ಹೇಗಿದೆ?” ಎಂದು ಹುಬ್ಬು ಹಾರಿಸಿದರು.

“ಇದೇನ್ರಿ ?” – ಸಂಗಪ್ಪ ಸುಸ್ತಾದಂತೆ ಕೇಳಿದ. “ಯಾರು ಬರೆದದ್ದು ಗೊತ್ತ ಇದುನ್ನ?”

“ನಂಗೇನ್ ಗೊತ್ತು ಮಣ್ಣು? ಅದ್ಯಾವನ್ರೀ ಬರಿದ್ದು ನೀವೇ ಹೇಳ್ರಿ. ಸುಮ್ನೆ ತಲೆ ತಿನ್ ಬ್ಯಾಡ್ರಿ.”

ಶಾನುಭೋಗರು ಠೀವಿಯಿಂದ ನಿಂತರು. ಕೆಮ್ಮಿದರು; ಜುಟ್ಟು ಕಟ್ಟಿದರು. ಕೆನ್ನೆ ಸವರಿಕೊಳ್ಳುತ್ತ “ಇದನ್ನ ಬರೆದ ಕವಿ ನಾನೇ ಸಾವ್ಕಾರ್ರೆ” – ಎಂದರು.

ಸಂಗಪ್ಪ ಏನೂ ಆಗದವನಂತೆ “ಏನ್ರಿ ಇದರರ್ಥ? ಇಷ್ಟಕ್ಕೂ ಇದನ್ನು ಕಟ್ಕೊಂಡು ನನಗೇನ್ರಿ ಆಗ್ಬೇಕು? ಇದಕ್ಕೂ ಆ ಪುಂಡರ ಪದ್ಯಕ್ಕೂ ಏನ್ರಿ ಸಂಬಂಧ?” ಎಂದ ಬೇಜಾರಿನಿಂದ.

“ಅದಕ್ಕೇ ನಿಮಗೆ ಸ್ವಲ್ಪ ಕಡಿಮೆ ಅನ್ನೋದು. ಇದನ್ನು ಯಾರ್ ಮೇಲೆ ಬರ್ದಿದ್ದೀನಿ ಗೊತ್ತ? ನಿಮ್ಮ ಮೇಲೆ; ನಮ್ಮ ಊರಿನ ದಣಿ, ಸಾವ್ಕಾರ್ ಸಂಗಪ್ಪನವರ ಮೇಲೆ” – ನಾಟಕೀಯವಾಗಿ ಹೇಳಿದ ಶಾನುಭೋಗರ ಮಾತಿಗೆ ರೋಮಾಂಚನಗೊಂಡ ಸಂಗಪ್ಪ “ಹೌದೇನ್ರಿ? ಇದರರ್ಥ ಏನ್ರಿ” ಎಂದ.

ಶಾನುಭೋಗರು ಗಂಟಲು ಸರಿಪಡಿಸಿಕೊಂಡು ಶುರು ಮಾಡಿದರು:

“ಅರಸುಗಳಿಗಿದು ವೀರ – ಅಂದ್ರೆ ನೋಡಿ, ನೀವು ಅರಸುಗಳಿಗೆ ಅಂದರೆ ರಾಜರಿಗೆ ವೀರ ಅಂದ್ರೆ ವೀರನ ಸಮಾನರು ಅಂತ. ಹಿಂದಿನ ಕಾಲದ ರಾಜರಿಗೂ ವೀರನ ಸಮಾನರು ನೀವು ಅನ್ನೋದು ತಾತ್ಪರ್ಯ. ಇನ್ನು ದ್ವಿಜರಿಗೆ ಅಂದ್ರೆ ಬ್ರಾಹ್ಮಣರಿಗೆ, ಪರಮ ವೇದದ ಸಾರ ಅಂದ್ರೆ ಶ್ರೇಷ್ಠವಾದ ವೇದಗಳ ಸತ್ವಸಾರವೇ ಇದ್ದಂತೆ ಅಂತ. ಬುದ್ಧಿಯಲ್ಲಿ ವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠರಾದ ನಿಮ್ಮಂಥ ಬ್ರಾಹ್ಮಣರಿಗೆ ನೀವು ವೇದಗಳ ಸತ್ವ ಸಾರದಂತೆ ಇದ್ದೀರಿ ಅಂದ್ಮೇಲೆ ಇದಕ್ಕಿಂತ ಇನ್ನು ಹೇಗೆ ಹೊಗಳೋಕೆ ಸಾಧ್ಯ?..”

ಅಂತೂ ಇಡೀ ಪದ್ಯಕ್ಕೆ ಇದೇ ರೀತಿ ಅರ್ಥ ಹೇಳಿ ಮುಗಿಸಿದಾಗ ಶಾನುಭೋಗರಿಗೆ ಹಣ ಸಂದಾಯವಾಯ್ತು; ಅಷ್ಟೇ ಅಲ್ಲ ಒಂದು ಆಜ್ಞೆಯೂ ಹೊರಬಿತ್ತು;

“ಇದನ್ನು ನಮ್ಮೂರಿನ ಸ್ಕೂಲ್ ಹುಡುಗ್ರಿಗೆ ಕಲ್ಸೊ ಏರ್ಪಾಟು ಮಾಡಿ. ನಮ್ಮೂರ್ನಾಗೆ ನಿಮ್ಮಂಥ ದೊಡ್ಡ ಕವಿ ಇರುವಾಗ ಇಷ್ಟಾದ್ರೂ ಆಗ್ಬೇಡ್ವೆ? ನಾನೂ ಸ್ಕೂಲ್ ಮೇಷ್ಟ್ರುಗೆ ಆಜ್ಞೆ ಮಾಡ್ತೀನಿ.”

ಈಗ ಮಾತ್ರ ಶಾನುಭೋಗರಿಗೆ ನಿಜಕ್ಕೂ ಪೀಕಲಾಟಕ್ಕಿಟ್ಟುಕೊಂಡಿತು. ಆ ಮೇಷ್ಟರು ಸಾವ್ಕಾರನಷ್ಟು ದಡ್ಡರಲ್ಲ ಅನ್ನೋ ನಂಬಿಕೆ ಇದ್ದದ್ದರಿಂದ ಸಮಸ್ಯೆ ದೊಡ್ಡದಾಯ್ತು. ಆದರೂ ನಿಬಾಯಿಸೋ ನಂಬಿಕೆ ಮೇಲೆ ಮಾತಾಡಿದರು:

“ಛೇ ! ಛೇ! ಅದು ಮಾತ್ರ ಬೇಡ ಸ್ವಾಮಿ. ನಾನು ಈಗಾಗ್ಲೆ ‘ತೊಲಗಾಚೆ ಕೀರ್ತಿ ಶನಿ’ ಅಂತ ಒಂದು ಪದ್ಯ ಬರ್ದಿದೀನಿ. ನನಗೆ ಕೀರ್ತಿಯ ಆಸೆ ಸ್ವಲ್ಪಾನೂ ಇಲ್ಲ.”

“ನಿಮಗೆ ಇಲ್ದಿದ್ರೆ ನನಗಿಲ್ವೇನ್ರೆ: ಸುಮ್ನೆ ಹೇಳ್ದಂಗ್ ಕೇಳ್ರಿ”

“ಕವಿಗಳನ್ನ ಹಾಗೆಲ್ಲ ಗದರಿಸಬಾರದು ಮಹಾಸ್ವಾಮಿ.”

“ಹೋಗ್ಲಿ, ಹೇಳಿದಂಗೆ ಏನಾರ ಮಾಡ್ರಪ್ಪ; ಅದೇನೊ ‘ಷಟಪ್‌’ನಲ್ಲಿ ಪದ್ಯ ಬರೀತಿನಿ ಅಂದಿದ್ರಲ್ಲ, ಇದೇನಾ?”

“ಷಟಪ್‌ನಲ್ಲಿ ?… ಓ… ಅರ್ಥವಾಯ್ತು ಷಟ್ಪದಿ. ಷಟ್ಪದೀಲಿ ಬರೀತೀನಿ ಅಂದಿದ್ದೆ. ಇದೇ… ಈಗ ತಾನೆ ಹೇಳಿದ್ನಲ್ಲ, ಇದೇ ಆ ಪದ್ಯ. ಒಂದ್ ಕೆಲ್ಸ ಮಾಡಾನ ಸಾವ್ಕಾರ್ರೆ?”

“ಏನು?”

“ನೋಡಿ ಈ ಪದ್ಯ ನಿಮಗೇ ಅರ್ಥವಾಗ್ಲಿಲ್ಲ. ಅದ್ರಿಂದ ಹುಡುಗರಿಗೆ ಕಲ್ಸೊದೇನೂ ಬೇಡ. ಆ ಪುಂಡ ಹುಡುಗ್ರು ಬರೆದ ಹಾಗೇನೆ ನಾನೂ ಒಂದು ಬರೀತೀನಿ. ಆಗ ಎಲ್ಲರಿಗೂ ಅರ್ಥವಾಗುತ್ತೆ. ಅದುನ್ನ ಊರೆಲ್ಲ ಕಲಿಸೋಣ ಬೇಕಾದ್ರೆ, ಬರ್ಯೋವರೆಗೂ ಸ್ವಲ್ಪ ಸಮಾಧಾನದಿಂದಿರಿ ಏನಂತೀರಿ?”

ಸಂಗಪ್ಪನಿಗೆ ಅದೂ ಸರಿಯೆನ್ನಿಸಿತು.

“ಹಂಗೆ ಮಾಡಿ; ಆದ್ರೆ ಈಗ ಸುಮ್ಕೆ ಕೈಕಟ್ಕಂಡ್ ಕೂತ್ಕಬಾರು ನೋಡಿ, ಆ ಹುಡುಗರಿಗೆ ಏನಾರ ಮಾಡ್ಬೇಕು. ಆ ಪದ್ಯ ಕಟ್ಟಿದ್ದಕ್ಕೆ ಕೈಕಾಲ್ ಕಟ್ಟಿ ಹಾಡಿದ್ದಕ್ಕೆ ಬಾಯಿಗೆ ಬಟ್ಟೆ ತುರಿಕಿ ಬಾವಿಗ್ ಎಸೀಬೇಕು ಅನ್ಸುತ್ತೆ.”

“ಹಾಗೆಲ್ಲ ಮಾಡೋದು ಬುದ್ಧಿವಂತಿಕೆ ಲಕ್ಷಣವಲ್ಲ. ಬೇರೆ ಏನಾದ್ರೂ ಮಾಡ್ಬೇಕು. ಈಗ ಸದ್ಯಕ್ಕೆ ರಾಜೇಂದ್ರನ ಅಮ್ಮನ್ನ ಕರೆಸಿ ಬೆದರಿಕೆ ಹಾಕಿ, ಆಮೇಲೆ ಆತ ಇದೊಂದೇ ಪದ್ಯ ಬರ್ದಿರಲಾರ. ಆದ್ರಿಂದ ಅವ್ರಮ್ಮನಿಗೆ ಹೇಳಿ ಮನೇಲಿ ಹುಡುಕ್ಸಿ ಬರ್ದಿರೊ ಪದ್ಯಗಳನ್ನೆಲ್ಲ ತರಿಸಿ; ಸುಟ್ಟು ಹಾಕಿ, ಏನಂತೀರಿ?”

ತಕ್ಷಣ ರಾಜೇಂದ್ರನ ಅಮ್ಮನಿಗೆ ಕರೆ ಹೋಯ್ತು. ಆಕೆ ದಿಗಿಲಿನಿಂದಲೇ ಬಂದಳು. ತನ್ನ ಮಗನ ಚಟುವಟಿಕೆಗಳ ಬಗ್ಗೆ ಏನೊ ತಾಕೀತು ಮಾಡಲು ಕರೆಸಿದ್ದಾನೆಂದು ಭಾವಿಸಿದಳು; ತನ್ನ ಮಗ ಇಷ್ಟೆಲ್ಲಾ ಮಾಡುತ್ತಿದ್ದರೂ ಈಕೆ ವಿಶೇಷವಾದ ತಡೆಯೇನೂ ಉಂಟುಮಾಡದ್ದಕ್ಕೆ ಕಾರಣವೂ ಇತ್ತು. ತಾನು ವಿಧವೆಯಾಗಲು ಮುಖ್ಯ ಕಾರಣ ಈ ಸಂಗಪ್ಪ. ತನ್ನ ಗಂಡ ರಂಗಪ್ಪ ದರ್ಜಿಯ ಕೆಲಸ ಮಾಡುತ್ತಿದ್ದ. ಆತನನ್ನು ಗ್ರಾಮ ಪಂಚಾಯ್ತಿ ಎಲೆಕ್ಷನ್ನಿಗೆ ನಿಲ್ಲಿಸುವ ಪ್ರಯತ್ನ ನಡೆದಿತ್ತು. ಇದು ಸಂಗಪ್ಪನ ಅಭಿಪ್ರಾಯಕ್ಕೆ ವಿರೋಧವಾಗಿ ನಡೆಯುತ್ತಿತ್ತು; ಇದರ ಸೇಡಿಗಾಗಿ ಕಾಯುತ್ತಿದ್ದ ಸಂಗಪ್ಪ ಒಂದು ಸಂಚು ಮಾಡಿದ, ಸಂಚಿನಲ್ಲಿ ರಂಗಪ್ಪ ಸಿಕ್ಕಿಬಿದ್ದ.

ಒಂದು ದಿನ ರಾತ್ರಿ ಆಚೆ ಕೇರಿಯ ಹುಡುಗಿ ಜಯಮ್ಮ ಬಂದಳು. ‘ಒಂದ್ ಕುಪ್ಪಸ ಹೊಳ್ಕೊಡಣ್ಣ’ ಎಂದಳು. ಬಟ್ಟೆ ಕೊಟ್ಟಳು. “ಅಳತೆ ಕೊಡಮ್ಮ” ಎಂದಾಗ “ಅಳ್ತೆ ಕುಪ್ಪಸ ತಂದಿಲ್ಲ. ಹಂಗೇ ಅಳ್ತೆ ತಕ್ಕಳಣ್ಣ” ಎಂದಳು. ರಂಗಪ್ಪ ಸ್ವಲ್ಪ ಹಿಂಜರಿದ. ತನ್ನ ಅಂಗಡಿಯ ಹೊರಕ್ಕೆ ಕೂತ ಕಡೆಯಿಂದಲೇ ನೋಡಿದ. ಇವನ ದಿಗಿಲು ಅರ್ಥ ಮಾಡಿಕೊಂಡ ಆಕೆ “ಯಾಕಣ್ಣ ಹಂಗ್ ನೋಡ್ತೀಯ? ನಮ್ಮಣ್ಣ ಇದ್ದಂಗಿದ್ದೀಯ ಅಳ್ತೆ ತಗಾ ಪರ್ವಾಗಿಲ್ಲ” ಎಂದು ಒತ್ತಾಯಿಸಿದಳು. ರಂಗಪ್ಪ ಎದ್ದು ಸ್ವಲ್ಪ ಬಾಗಿಲು ಮುಂದು ಮಾಡಿ ಅಳತೆ ತೆಗೆದುಕೊಳ್ಳಲು ಹೋದ. ತಕ್ಷಣ ಆಕೆ ಕಿರುಚಿಕೊಂಡಳು. ರಂಗಪ್ಪ ಬೆಚ್ಚಿದ, ಅವನಿಗೆ ಪರಿಸ್ಥಿತಿ ಅರ್ಥವಾಗುವುದರೊಳಗೆ ಒಂದಷ್ಟು ಜನ ಒಳಗೆ ನುಗ್ಗಿದರು. ರಂಗಪ್ಪನನ್ನು ಹೊರಗೆ ಎಳೆದರು.

ರಂಗಪ್ಪ ಪ್ರತಿಭಟಿಸಿದ, ವಿಷಯ ಹೇಳಲು ಪ್ರಯತ್ನಿಸಿದ. ಆದರೆ ಅವರಾರಿಗೂ ಅದು ಬೇಕಿರಲಿಲ್ಲ. ಬೀದಿಯಲ್ಲಿ ಎಳೆದುಕೊಂಡು ಹೊರಟರು. ಛೀ ಥೂ! ಎನ್ನುತ್ತಾ ಕತ್ತು ಹಿಡಿದು ನೂಕಿದರು. ಕೆನ್ನೆಗೆ ಬಾರಿಸಿದರು. ಬಯ್ದರು. ಹೀಗೆ ಸಂಗಪ್ಪನ ಬಳಿ ಕರೆತಂದರು. ಆ ವೇಳೆಗೆ ಊರಿಗೂರೇ ಸೇರಿತ್ತು. ಈಕೆಯೂ ಹೋದಳು. ಸಂಗಪ್ಪನನ್ನು ಬೇಡಿದಳು. ತನ್ನ ಗಂಡ ಅಂಥೋನಲ್ಲ ಅಂತ ಅತ್ತಳು. ಅದರೆ ಜನ ಜಪ್ಪೆನ್ನಲಿಲ್ಲ. “ಕಂಬಕ್ಕೆ ಕಟ್ಟಿ ಚನ್ನಾಗ್ ಬಾರುಸೊ” ಎಂದ. ಕೂಡಲೆ ಇದನ್ನು ಶಿರಸಾವಹಿಸಿ ಪಾಲಿಸಲಾಯಿತು. ಎಲೆಕ್ಷನ್ನಿಗೆ ನಿಲ್ಲಲು ಹುರುಪು ಕೊಟ್ಟವರಾರೂ ಬಿಡಿಸಲು ಮುಂದೆ ಬರಲಿಲ್ಲ. ಇದು ಹೆಣ್ಣಿನ ವಿಷಯ ಅಂತ ಮೌನ ತಾಳಿದರು.

ಇದಾದ ಮೇಲೆ ರಂಗಪ್ಪ ಊರಿನಿಂದ ಕಾಣೆಯಾದ, ಎಲ್ಲಿ ಹೋದ ಎಂದು ಯಾರೂ ಖಚಿತವಾಗಿ ಹೇಳಲಿಲ್ಲ. ಅವಮಾನಿತನಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಬಹಳಷ್ಟು ಜನರ ಊಹೆ. ಸಂಗಪ್ಪನೇ ಸಾಯಿಸಿರಬೇಕೆಂದು ಮತ್ತೊಂದು ಒಳ ಊಹೆ ಯಾವುದು ನಿಜವೂ ಅಂತೂ ಅವನು ಬಂದಿಲ್ಲ; ಯಾಕೆಂದರೆ ಬದುಕಿಲ್ಲ.

ಈ ನೆನಪು ರಾಜೇಂದ್ರನಿಗೆ ಮತ್ತು ಆತನ ತಾಯಿಗೆ ಆರದ ಗಾಯವಾಗಿತ್ತು. ಅದಕ್ಕೆ ಉಪ್ಪು ಸವರಲೆಂಬಂತೆ ಸಂಗಪ್ಪ ಈಗ ಕರೆಸಿದ್ದ. ಈಕೆ ಬಂದ ಕೂಡಲೆ ಸಂಗಪ್ಪ ಬಾಣ ಬಿಟ್ಟ.

“ಏನ್ ನಿನ್ ಮಗುನ್ನ ನನ್ ಮೇಲ್ ಬಿಟ್ಟು ಮನ್ಯಾಗ್ ಕುಂತಿದ್ದೀಯಾ ಹೆಂಗೆ?”

ಈಕೆ ಮಾತಾಡಲಿಲ್ಲ. ಆತ ಸುಮ್ಮನಿರಲಿಲ್ಲ, ಹೆದರಿಸಿದ. ರಾಜೇಂದ್ರ ಹೀಗೇ ಇದ್ದರೆ ಅವನಿಗೆ ‘ಸರ್ಯಾಗ್ ಬುದ್ದಿ ಕಲುಸ್ತೀನಿ’ ಎಂದು ಎಚ್ಚರಿಸಿದ. ಕಡೆಗೆ ವಿಷಯಕ್ಕೆ
ಬಂದ.

“ನಿನ್ ಮಗ ಏನೊ ಕವಿತೆ ಗಿವಿತೆ ಬರ್ದವ್ನಂತಲ್ಲ, ಆ ಪುಸ್ತಕ ಎಲ್ಲ ತಂದ್ ಕೊಡ್ಬೇಕು.”
“ಅದೇನೋ ನಂಗೊತ್ತಿಲ್ಲ ಸಾವ್ಕಾರ್ರೆ”
“ಗೊತ್ತಿಲ್ಲ ಅಂದ್ರೆ ಗೊತ್ತಾಗಂಗ್ ಮಾಡ್ತೀನಿ. ಸುಮ್ನೆ ತಂದ್ಕೊಟ್ರೆ ಸರಿ ಇಲ್ದಿದ್ರೆ ನಿನ್ ಸುಮ್ಕೆ ಬಿಡಲ್ಲ.”
“ಅವ್ನು ಆಟೆ, ನನ್ ಸುಮ್ಕೆ ಬಿಡಲ್ಲ ನಾನ್ ತಂದ್ಕೊಟ್ರೆ”
“ನಿಂಗವ್ನ್ ಹೆಚ್ಚೊ ನಾನ್ ಹೆಚ್ಚೋ?”
“ನಂಗ್ ನನ್ನಗ ಹೆಚ್ಚು”
“ಬಾಯ್ ಮುಚ್ಚು”

ಬಾಯಿ ಮುಚ್ಚಿದಳು. ಆದರೆ ಸಂಗಪ್ಪ ಬಾಯಿಗೆ ಬಂದಂತೆ ಬಯ್ದ, ಕಡೆಗೆ ಎಚ್ಚರಿಕೆ ನೀಡಿದ.

“ನಿನ್ ಗಂಡನ್ ಗತಿ ಏನಾಯ್ತು ಅಂತ ಜ್ಞಾಪಿಸ್ಕ. ನಾಳೆ ನೀನು ತಂದ್ ಕೊಡ್ದಿದ್ರೆ ನಾಡಿದ್ದು ನಿನ್ನ ಮಗನ ಗತೀನೂ, ನಿನ್ ಗಂಡನ್ ಥರಾನೆ ಆಗುತ್ತೆ.”

ಹಳೆಯ ನೆನಪಿನಿಂದ ಆಕೆ ತತ್ತರಿಸಿದಳು, ಮೌನವಾಗಿ ಹಿಂತಿರುಗಿದಳು. ದಿನವೆಲ್ಲಾ ಯೋಚಿಸಿದಳು, ಕಡೆಗೆ ಮಗನ ನೋಟ್ ಪುಸ್ತಕಗಳನ್ನೇ ತೆಗೆದುಕೊಂಡು ಹೋಗಿ ಕೊಟ್ಟಳು. ಅದರಲ್ಲಿ ಶಾನುಭೋಗರು ಕವಿತೆಗಳ ಬುಕ್ಕುಗಳನ್ನು ಹುಡುಕಿ ಸಂಗಪ್ಪನ ಕೈಗೆ ಕೊಟ್ಟರು. ಸಂಗಪ್ಪ ಅವಕ್ಕೆ ಸೀಮೆ ಎಣ್ಣೆ ಹಾಕಿದ. “ಬಡವರ ಉದ್ಧಾರ ಮಾಡ್ತೀರೊ ಬಡವರ ಉದ್ದಾರ! ನಮ್ಮಂಥೋರ ಮಟ್ಟ ಹಾಕ್ತಾರಂತೆ ಮಟ್ಟ” ಎಂದು ಹಲ್ಲು ಕಡಿಯುತ್ತ ಬೆಂಕಿ ಕಡ್ಡಿ ತೀಡಿ ಇಟ್ಟ.

ಕವಿತೆಗಳು ಧಗ ಧಗ ಉರಿದವು!
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...