ಎಂದೋ-ಯಾರೋ ಉರುಳಿಸಿದ
ಖಂಡಿತ ಮಂದಿರ, ಮಸೀದಿಗಳ
ಅಡಿಪಾಯದಡಿಯಲ್ಲಿ ನನ್ನನ್ನೇಕೆ ಸಿಕ್ಕಿಸುವಿರಿ
ಯಾರೋ ಉರುಳಿಸಿದ ಮಂದಿರಗಳ ಭಾರ
ನನ್ನ ಹೆಗಲಿಗೇಕೆ ಹೊರಿಸುವಿರಿ?
ಯಾರೋ ಮಾಡಿದ ತಪ್ಪಿಗೆ ನನಗೇಕೆ ಬರೆ?
ಛಿದ್ರಗೊಂಡ ಮಂದಿರದ ಕಲ್ಲುಗಳನ್ನೆತ್ತಿ
ನನ್ನ ಮೇಲೇಕೆ ಎಸೆಯುವಿರಿ ಹೇಳಿ?
ಹಾಡು ಹಗಲೇ ಮಸೀದಿಗಳನ್ನೇಕೆ ಉರುಳಿಸುವಿರಿ.
ಈ ಕ್ಷಣ ಹತ್ಯೆಯಾಗುತ್ತಿರುವ ಮನುಷ್ಯರ ಬಗ್ಗೆ
ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿರುವವರ ಬಗ್ಗೆ.
ಒಮ್ಮೆ ಕಣ್ಣೀರಾಗಿ, ಮಗದೊಮ್ಮೆ ಕವಿತೆಯಾಗಿ
ಸಿಡಿಯುತ್ತಿರುವ ಸಿಡಿಮದ್ದಾಗಿ
ನನ್ನ ದೇಹದ ತುಂಬ ನೋವಿನ ಗಾಯಗಳ
ಹೆಕ್ಕಿ ಕೆದಕಿ ರಕ್ತಗೊಳಿಸುವಿರೇಕೆ?
ಕೋಮುವಾದಿಗಳ ಜಾಡು ಹಿಡಿದು ಪೀಡಿಸಿ,
ಈ ಮಣ್ಣಿನಲಿ ಒಂದಾದ ನನ್ನ ಪೂರ್ವಜರ
ಮೂಳೆಗಳು ಅಸ್ಥಿಪಂಜರಗಳಿವೆ ನೋಡಿ
ಮೂಳೆಗಳ ಹೇಗೆ ಬೇರ್ಪಡಿಸುವಿರಿ?
ಮಣ್ಣಲ್ಲಿ ಒಂದಾಗಿ ಗೊಬ್ಬರವಾದವರ
ಒಂದಾದ ಮನಸುಗಳ ಹೇಗೆ ಬೇರ್ಪಡಿಸುವಿರಿ?
ಯಾರದೋ ತಪ್ಪಿಗೆ ಯಾರಿಗೋ ಬರೆಯೇಕೆ
ಎಂದೋ ಯಾರೋ ಉರುಳಿಸಿದ ಮಂದಿರದ
ಕಲ್ಲುಗಳ ಭಾರ ನನಗೇಕೆ ಹೊರಿಸುವಿರಿ?
*****