ಗುತ್ತಿಗೆದಾರರ ದೇವಸ್ಥಾನದಲ್ಲಿ
ಜೀತಕ್ಕಿರುವ ದೇವರುಗಳೇ
ಹೇಳಿ ಈ ಎಂಜಲೆಲೆ ಎತ್ತುತ್ತ
ತುತ್ತು ಕೂಳಿಗಾಗಿ
ಎಸೆದ ಎಲೆಗಳ ಸುತ್ತ
ನಿಂತವರು ಬೀದಿ ಮಕ್ಕಳು ತಾನೆ?
ದೇವರೇ ನೋಡಲ್ಲಿ
ಹೆಕ್ಕುತ್ತಿರುವ ತುತ್ತನ್ನು
ಮಕ್ಕಳ ಕೈಯಿಂದ ಕಿತ್ತು
ತಿನ್ನುತ್ತಿರುವ ನಾಯಿಗಳಿವೆ.
ಹೊಟ್ಟೆ ಹಸಿವು ತಡೆಯದೇ
ದಿನನಿತ್ಯ ರಕ್ತ, ಕಿಡ್ನಿ
ಮಾರಿಕೊಳ್ಳುವ ಬಡವರಿದ್ದಾರೆ.
ಹೇಳಲಾಗದ ಮಾತು
ನುಂಗಲಾರದ ನೋವು
ಸತ್ತ ಮುಖಗಳ ಹಿಂದೆ
ಮೂಕ ರೋದನದ ಬಿಕ್ಕು
ಬದುಕು ಯಾತನೆಯ ಶಿಬಿರ
ಕೊನೆಯಾಗುವುದು ಒಂದು ದಿನ
ಕಸದ ತೊಟ್ಟಿ, ರಸ್ತೆ ಬೀದಿಯಲಿ
ಲೋಕದಲಿ ಬಡವರ ಬದುಕು
ಕೊನೆಯಾಗುವುದು ಹೀಗೆಯೇ ತಾನೆ?
*****