ದೋಣಿಯೊಂದು ಹುಟ್ಟು ನಿನಗೆ
ದೋಣಿಯೊಂದು ಹುಟ್ಟು ನನಗೆ
ದೋಣಿಯೊಂದೆ ಯಾನವೊಂದೆ
ಜೀವ ನದಿಯು ಒಂದೆಯೆ
ಎಲ್ಲಿ ಯಾಕೆ ಸಾಗುತ್ತಿದೆ
ತಿಳಿಯದು ನದಿ ನೀರಿಗೂ
ಇರುವತನಕ ಹರಿವುದೊಂದೆ
ಇರುವ ಗತಿಯು ಜೀವಿಗೂ
ಹಕ್ಕಿ ನೀನು ಹಕ್ಕಿ ನಾನು
ಗೂಡು ನಮ್ಮದೊಂದೆಯೆ
ಎಲ್ಲಿ ಹಾರಿ ಹೋದರೂ
ಮರಳಿ ಬರುವುದಲ್ಲಿಯೆ
ಒಂದು ಹಕ್ಕಿಗೊಂದು ಬಾಣ
ಹುಟ್ಟಿದಾಗಲೆ ಹೂಡಿದೆ
ಯಾರು ಮೊದಲು ಯಾರು ಮತ್ತೆ
ಉರುಳುವರೊ ತಿಳಿಯದೆ
ಆಗ ಬರುವುದೀಗ ಬರುವು-
ದೆಂದಾದರು ಬರುವುದು
ತಿರುಗಿ ನೋಡುವಷ್ಟರಲ್ಲಿ
ಒರಗಿ ಹೋಗಿರುವುದು
ಕ್ಷಣವೊಂದು ಯುಗದಂತೆ
ಬದುಕಬಲ್ಲೆವಾದರೆ
ಹಿಂದಿಲ್ಲ ಮುಂದಿಲ್ಲ
ಇಂದಿಗೆ ಸಾವೆಂಬುದಿಲ್ಲ
ಎಂದೆಂದಿಗು ಅಮರ್‍ತ್ಯರೆ
*****


















