ತಾಯಿ ದೊರಕುತ್ತಾಳೆ
ಇಲ್ಲಿ ಅಗ್ಗದ ದರದಲ್ಲಿ
ತಾಯಿಯ ತಾಯ್ತನ ಬಂದಿತು
ವ್ಯಾಪಾರೀಕರಣದ ಕಕ್ಷೆಗೆ
ಜಾಗತೀಕಕರಣದ ಉದ್ಯಮಕೆ.
ತಾಯಿಯ ಗರ್‍ಭವೂ ಬಿಡದೆ
ಮಾರುಕಟ್ಟೆಗೆ ತಂದಿದ್ದೇವೆ
ದುಡ್ಡಿನ ದಣಿಗಳೇ ಬನ್ನಿ
ಮಾರಾಟದ ಬೋಲಿಗಳನು
ಎಗ್ಗಿಲ್ಲದೆ ಕೂಗಬನ್ನಿ.
ಹರಿದು ಬಂದವು ಮಾರುಕಟ್ಟೆಗೆ
ಹಲವು ಹದಿನಾರು ಉದ್ಯೋಗಗಳು
ಹೊಸದೊಂದು ಸೇರ್‍ಪಡೆ ಅದಕ
ಗರ್‍ಭಕೋಶದ ಉದ್ಯಮ.
ಅಗ್ಗದ ದರದಲ್ಲಿ ಸಿಕ್ಕುತ್ತಾರೆ
ಮಾರುಕಟ್ಟೆಯಲಿ ಮಾತೆಯರು
ವಿದೇಶಿ ಗ್ರಾಹಕರಿಗಾಗಿಯೇ
ಇದ್ದಾರಿಲ್ಲಿ ಅಗ್ಗದ ತಾಯಂದಿರು.
ಹೊಸದೊಂದು ಧಂದೆಯಾಗಿ
ಬಾಡಿಗೆಯ ತಾಯ್ತನ
ಸಂತಾನೋದ್ಯಮದ ಕೆಲಸ
ಸಂತಾನಹೀನರಿಗೆ ಆಕರ್‍ಷಕ ತಾಣ.
ಧರ್‍ಮದ ಠೇಕೇದಾರರೇ ಬನ್ನಿ
ಮಾತೃ ದೇವೂಭವದ ನಾಡಿನಲಿ
ತುತ್ತಿನ ಚೀಲ ತುಂಬಿಕೊಳ್ಳಲು
ತಾಯ್ತನ ಮಾರಾಟಕ್ಕಿದೆ ಬನ್ನಿ.
ತಡೆಯುವದಾದರೆ ತಡೆಯಬನ್ನಿ.
*****