ಹಸುವಿನ ಹೆಸರು ಯಶೋದಾ
ಅದರ ಬಣ್ಣ ಊದಾ
ಅದೊಂದು ಕರುವನು ಈದ
ಸಂಗತಿಯೇನು ಪ್ರಮಾದ?
ಅದರಿಂದೆನಗೀ ಕವಿತೆಯ ಬಾಧ
ಪ್ರಾಸವ ಬರೆವ ವಿನೋದ.
ನಾನದಕಿತ್ತುದು ನೂರು ರುಪಾಯಿ
ಮಧ್ಯಸ್ಥಿಕೆಗಿರೆ ರಂಗಾಬೋಯಿ
ನೆರೆಮನೆಯೊಳಗಿದಕಾಯಿತು ಸಾಲ
ಬಿತ್ತರಿಸಿತೆಮ್ಮ ಮಮತೆಯ ಜಾಲ
ಇಂತು ಯಶೋದೆಯ ಬಾಳಿನ ಮೇಲೆ
ಪ್ರಕೃತಿಯ ಮತ್ತೂಂದಾವರಣದವೊಲೆ.
ಇದಕ್ಕೂ ಚೆಂದದ ಹಸುವಿನ್ನುಂಟೆ
ಇದರ ಸುಗುಣಗಳು ನಾಲ್ಕೆ ಎಂಟೆ
ಗಿಡ್ಡವಾಗಿಹುದು ಕರೆಯುವ ಜಾತಿ
ಸೌಮ್ಯವಾದ ಬಲು ಅಂದದ ಮೂತಿ
ನಮ್ಮ ಪಾಲಿಗಿದುವೇ ಸುರಧೇನು
ಎರಡೇ ದಿನ ಈನುವುದಿನ್ನೇನು
ಇಂತೀ ಪರಿಯೊಳು ನಡೆದಿರೆ ಮಾತು
ಪ್ರಸೂತಿವೇದನೆ ಯಶೋದೆಗಾಯ್ತು
ನಿಲ್ಲದೆ ಮಲಗದೆ ಬೇನೆಯ ತಿನುತ
ನೀರವವಾಗಿಯೆ ಬಾಧೆಯ ಪಡುತ-
ನಾನೊಪ್ಪುವೆ ಈ ನೀರವ ಭಾವ
ನನ್ನಚ್ಚರಿಸಿತು ಒಂದರೆ ಜಾವ
ಬೆದೆಗಾಲದ ಹಮ್ಮೈಸಿಕೆಯೊಳಗೆ
ಪೆರ್ಭಯದಂಬಾ ಸಂರುತಿಯೊಳಗೆ
ತನ್ನ ಹೊರಗಿರುವ ಜೀವದ ನೆರವ
ಆತ್ಮಸ್ವಾಸ್ಥ್ಯಕೆ ಯಾಚಿಸುತ್ತಿರುವ
ಪರಿಯಿಲ್ಲೀ ದಿನ ನಮ್ಮೀ ಪಶುವಿಗೆ
ತನ್ನ ಪ್ರಕೃತಿಯೆ ತನಗಾಗಿರೆ ಹಗೆ
ತಿತಿಕ್ಷೆಯೇ ಗತಿ ಬೇರಿನ್ನಿಲ್ಲ
ಎಂದರಿಯಿತೊ ಇದು ಯಾವನು ಬಲ್ಲ-
ಅಂತೂ ನೋವನು ಮೌನದಿ ಸಹಿಸಿ
ಈ ಮೌನದೊಳೆನ್ನಚ್ಚರಿಗೊಳಿಸಿ
ಯಶೋದೆ ಈದಿತು ಹೋರಿಕರುವನು
ತಾಯ ಗರ್ಭದಿಂ ಹೊರಟ ಶಿಶುವನು
ಸ್ವಾಗತಿಸಿರೆ ನಾವಮೃತದಾಸೆಯಿಂ
ಹಸು ಸುತನಂ ನೆಕ್ಕಿತು ಅಕ್ಕರೆಯಿಂ.
ಎಳೆಯರು ಕರೆದರು ಗೋಪೀನಾಥ
ಹೊಸಬನಿವನು ಆದೊಡೆ ನಿರ್ಭೀತ
ರೋದನವಿಲ್ಲದೆ ಜಗಕ್ಕೆ ಬಂದ
ಎರಡೇ ಚಣದೊಳು ಸ್ವತಂತ್ರ ನಿಂದ
ಕೆಚ್ಚಲಿನೊಳು ತನ್ನ ನ್ನವ ಕಂಡ
ಅಧಿಪತಿಯಂದದಿ ತಾನದನುಂಡ.
ಈತನ ಮೈಯೇನಚ್ಚರಿಮಾಟ
ಈತನ ಬಗೆ ಏ ಮಾಯೆಯ ಹೂಟ
ಅಗೊ ಅಗೊ ನನ್ನೆಡೆ ಕೊಂಕಿನ ನೋಟವ-
ನಿಡುತಿಹನಬ್ಬ ನೋಡಿವನಾಟವ
ಗರ್ಭದಿ ನಿನ್ನಾಲಿಯ ಸಮೆವಂದು
ನೋಟವದಾವುದ ಬಯಸಿದೆ ಬಂಧು
ಆ ಕತ್ತಲೆಯೊಳು ಏ ಬೆಳಕನ್ನ
ಹಾರೈಸಿದ್ದೆಯೊ ನೀ ಬಹ ಮುನ್ನ
ಈ ಜಗವಚ್ಚರಿಯಲ್ಲವೆ ನಿನಗೆ
ಇಲ್ಲಿ ಕಾಂಬೆಯಾ ನೀ ಬಗೆದ ಬಗೆ?
ನೀನೀ ತೆರದೊಳು ನೋಡುವ ರೀತಿ
ಕಿವಿಯನು ನಿಮಿರಿಸುತಾಲಿಪ ರೀತಿ
ಕರಣದ ತುದಿ ವಿಷಯದ ತುದಿ ಸೇರಿ
ಏನೋ ಶಕ್ತಿಗೆ ಸಮಯುತ ದಾರಿ
ಏನೋ ಬೆಳಕಿನ ಹರಿವನು ತೋರಿ
ಮನದೊಳು ನವತೇಜದ ಕಳೆಬೀರಿ
ಹೊಸತೊಂದಿರವಿನ ಪರಿಯಂ ಸಾರಿ
ಹೊಸ ತೆರದೊಳು ಭವಜಲಧಿಯ ವಾರಿ
ತೆರೆಯಿಡುತಿಹ ರೀತಿಯ ತೋರುತಿದೆ
ನಿನ್ನೀ ಲೀಲೆಗೆ ನಿರ್ವ್ಯಾಜಂ ಎದೆ
ಒಲಿದಿಹುದೈ ಮುದವಾನುತಲೀಗ
ಎಲ್ಲರಿಗೂ ಮುದ್ದಾದೆಯೊ ಬೇಗ.
ಅತ್ತಣಿನಿತ್ತಡೆ ಬಂದಿರುವಣ್ಣ
ನಿನ್ನಿರವನು ಇಹ ಕವಿಯುವ ಮುನ್ನ
ಪೇಳೈ ಆವನು ನಮ್ಮಿಬ್ಬರನೂ
ನಮ್ಮ ನಂಟಿನ ಇವರೆಲ್ಲರನ್ನೂ
ಈ ತರ ತಡಿಕೆಯ ಪಂದ್ಯದೊಳೋಡಿಸಿ
ಓಡಿಸಿ ಆಡಿಸಿ ಕಾಡಿಸಿ ಬಾಡಿಸಿ
ಪಣವೇನಂ ಗೆಲೆ ಬಯಸಿಹನಯ್ಯ?
ಇದರೊಳು, ದಿಟ, ನಿನಗೌದಾಸೀನ್ಯ
ಈ ಓಟವು ನಿನಗಿನ್ನೂ ಲೀಲೆ
ನನ್ನ ದಣಿವಿನನುಭೂತಿಯ ಕೇಳೆ.
ಚಿಣ್ಣಾ, ತೋಳ್ತೆಕ್ಕೆಗೆ ಬಾರಣ್ಣಾ
ನಿನ್ನಾಲಿಂಗನವೆನಿತಿನಿದಣ್ಣಾ
ಹೊಸಮೈಕೂದಲ ನಸುಬಿಸಿಯಿಂಪು
ಹೊಸ ಬಾಳಿನ ಸಂಸರ್ಗದ ಸೊಂಪು
ಗಂಗಾಸ್ನಾನದ ಶುಚಿಯಾಯ್ತಣ್ಣ
ದೇವರ ಮುಟ್ಟಿದ ಪೆರಿಯಾಯ್ತಣ್ಣ-
ಬೆಚ್ಚು ವೆ ಏಕೀ ಸ್ಪರ್ಶಕೆ ಕರುವೇ
ಈ ಮುದ್ದಿಗೆ ಈ ಒದೆತವು ತರವೇ?
ಚಿಮ್ಮುವೆ ಹಮ್ಮೈಸುವ ತಾಯೆಡೆಗೆ
ಗರ್ಭದ ತಡೆಯಿರಿ ಮಮತೆಯ ತಡೆಗೆ
ಅಂಬಾ ಎನ್ನುವೆ ನೀ ಮರುನುಡಿಗೆ
ಆಹ್ಹಾ ನೀ ನಡೆದಾಡುವ ಬೆಡಗೇ!
ಇಂತೀಪರಿಯೊಳು ಕರುವನು ಮುದ್ದಿಸಿ
ಈ ಅರ್ತಿಯೊಳೆನ್ನೊಳಗಂ ಶುದ್ದಿಸಿ
ಹಮ್ಮೈಸುವ ತಾಯ್ನುಡಿಯಂ ಕೇಳಿ
ಅಂಬಾ ಎನ್ನುವ ಕರುವಂ ಕೇಳಿ
ಇಂತೆರಡಿರವಿನ ಬಗೆತುದಿಯಿಂದ
ವಿದ್ಯುತ್ಕಣ ಸಿಡಿದಾಡುವ ಚೆಂದ
ವಾತ್ಸಲ್ಯಂ ಪರಿದಾಡುವ ಬಗೆಗೆ
ಸೋಜಿಗಗೊಳ್ಳುತೆ ಯಶೋದೆಯೆಡೆಗೆ
ನಮ್ಮಿ ಗೋಪೀನಾಥನ ಬಿಟ್ಟು
ಅಂದಿನಚ್ಚರಿಗೆ ಈ ನುಡಿಗಟ್ಟು
ನನ್ನೊಳು ವೇದನೆಗೊಳ್ಳಲು ಇಂತು
ಬರೆದೆನು-ಈ ಕತೆ ಮುಗಿಯಿತು ಅಂತು.
ಇದನೋದಲು ನಾ ಮುತ್ತಣ್ಣನಿಗೆ,
“ಗದ್ಯವೊ ಪದ್ಯವೊ ಏನಿದರ ಬಗೆ
ನಿನ್ನದು, ಬಿಡು, ಬಲು ಅಂತರ್‌ದೃಷ್ಟಿ
ಸೃಷ್ಟಿಯೊಳಗೆ ನೀ ವಿಚಿತ್ರಸೃಷ್ಟಿ
ಹಸು ಕರುವೀದರೆ ಅಚ್ಚರಿಯೇಕೆ?
ಹೊಸತನುಭವ ನಿನಗಾದೊಡೆ ಜೋಕೆ
ಹೆಜ್ಜೆ ಹೆಜ್ಜೆಗೂ ಬೆರಗೆನಬೇಡ
ನಿನಗೇ ಬೆರಗೆಂಬರು ಜನ ನೋಡ”
ಎನುತೀ ಪರಿ ದಟ್ಟಿಸಿ ನಗೆಯಾಡಿ
ತುಸ ಚಿಂತಿಸಿ ಬಳಿಕೆನ್ನನು ನೋಡಿ
“ದಿಟ, ಸೋಜಿಗವೀ ಪಂದ್ಯದ ಓಟ
ನಮಗಿಂತಾಯಿತು ದೇವರ ಕಾಟ.
ಈ ಬಾಳ ಮುಂದೆ ಮತ್ತಾವ ತಡಿಕೆಯೋ
ಏ ಜನ್ಮವೊ ಮೇಣೇನು ದುಡಿಕೆಯೋ
ನಮಗೀ ಬಾಳಿನೊಳೇನು ರುಚಿಸದೋ
ಆ ಬಾಳೇ ಮುಂದಕ ನಮಗಹುದೊ?
ಎಲ್ಲಾ ಜನ್ಮದ ರುಚಿಗಳನುಂಡು
ಸಿಹಿ ಕಹಿ ಎನ್ನದ ಹದವನು ಕಂಡು
ಥೂ ಛೀ ಸೈ ಎಂಬುದ ಬಿಡುವರೆಗೂ
ತಡಿಕೆಯ ಓಟವೆ ನನಗೂ ನಿನಗೂ.
ನಿರ್‌ವೈರಾಗ್ಯಗೆ ಮುಕ್ತಿಯೆ? ಭ್ರಾಂತಿ.
ಸಮತೆಗೆ ಸಲ್ಲದಗೆಲ್ಲಿಯ ಶಾಂತಿ?”
ಎನ್ನುತ ತತ್ತ್ವವನೊರೆದನು ನನಗೆ
ಇಲ್ಲಿಗೆ ಮುಗಿಯಿತು ಈ ಬರೆವಣಿಗೆ.
*****